ಸಿಂಧನೂರಿಗೆ ಕ್ಲಸ್ಟರ್ ಮಟ್ಟದ ವಿವಿ ಪರೀಕ್ಷಾ ಕೇಂದ್ರ ಮಂಜೂರು

<ಪತ್ರ ಸಮರಕ್ಕೆ ಮಣಿದ ಗುಲ್ಬರ್ಗಾ ವಿವಿ>ವಿಜಯವಾಣಿ ವರದಿ ಪರಿಣಾಮ ಕೇಂದ್ರದ ವ್ಯಾಪ್ತಿಗೆ ಲಿಂಗಸುಗೂರು>

ಸಿಂಧನೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಪತ್ರ ಸಮರ, ಹೋರಾಟದ ಬಳಿಕೆ ಗುಲ್ಬರ್ಗಾ ವಿಶ್ವವಿದ್ಯಾಲಯ ಕ್ಲಸ್ಟರ್ ಮಟ್ಟದ ಪರೀಕ್ಷಾ ಕೇಂದ್ರ ಮಂಜೂರು ಮಾಡಿದೆ.


ಪ್ರಥಮ ದರ್ಜೆ ಕಾಲೇಜಿನಲ್ಲಿ 403 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದು, 38 ವಿದ್ಯಾರ್ಥಿಗಳು ರಿಪಿಟರ್ಸ್‌ ಇದ್ದು, 441 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶಂಕರ್‌ಟ್ರಸ್ಟ್ ಹಾಗೂ ವಿಜಡಂ ಕಾಲೇಜ್ ಸೇರಿ 130 ವಿದ್ಯಾರ್ಥಿಗಳಿದ್ದು, ರಿಪಿಟರ್ಸ್‌ ಸೇರಿ ಒಟ್ಟು 575 ವಿದ್ಯಾರ್ಥಿಗಳು ಈ ಹಿಂದೆ ಕಾಲೇಜ್‌ನಲ್ಲಿ ಪರೀಕ್ಷಾ ಬರೆದಿದ್ದರು.


ಈ ಬಾರಿ ಕ್ಲಸ್ಟರ್ ಮಟ್ಟದ ಪರೀಕ್ಷೆ ಜಾರಿಯಾದ ಹಿನ್ನೆಲೆಯಲ್ಲಿ ರಾಯಚೂರು ಪರೀಕ್ಷಾ ಕೇಂದ್ರಕ್ಕೆ ಸಿಂಧನೂರು, ಲಿಂಗಸುಗೂರು ತಾಲೂಕಿನ ಕಾಲೇಜ್‌ಗಳ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಹೆಚ್ಚಿನ ಸಮಸ್ಯೆಯಾಗುವ ಬಗ್ಗೆ ಪ್ರಾಚಾಯರ್ಯರು ಪತ್ರ ವ್ಯವಹಾರ ನಡೆಸಿದ್ದರು. ವಿದ್ಯಾರ್ಥಿಗಳು ಸಹ ಬೀದಿಗಿಳಿದು ಹೋರಾಟ ಮಾಡಿದ್ದರು. ಅದಕ್ಕೂ ವಿವಿ ಜಗ್ಗಲಿಲ್ಲ. ಕೊನೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರು, ವಿವಿಗೆ ಪತ್ರ ಬರೆದು ಸಮಸ್ಯೆ ತಿಳಿಸಿದ್ದರು.


ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ರಾಯಚೂರಿಗೆ ತೆರಳಿ ಪರೀಕ್ಷೆ ಬರೆಯಲು 200 ಕಿಮೀ ಕ್ರಮಿಸಬೇಕಿದೆ. ಕೂಡಲೇ ಪರೀಕ್ಷಾ ಕೇಂದ್ರವನ್ನು ಮೊದಲಿದ್ದ ಪ್ರಥಮ ದರ್ಜೆ ಕಾಲೇಜ್‌ಗೆ ನೀಡಬೇಕು ಎಂದು ಕುಲಸಚಿವರಿಗೆ ಆಗ್ರಹಿಸಿದ್ದರು. ಈ ಕುರಿತು ವಿಜಯವಾಣಿ ಡಿ.21ರಂದು ಭತ್ತದ ನಾಡಿಗಿಲ್ಲ ಪಿಜಿ ಪರೀಕ್ಷಾ ಕೇಂದ್ರ ಎಂಬ ಶೀರ್ಷಿಕೆಯಡೆ ವಿಶೇಷ ವರದಿ ಪ್ರಕಟಿಸಿ, ಸಮಸ್ಯೆ ಮೇಲೆ ಬೆಳಕು ಚಲ್ಲಿತ್ತು. ಕೊನೆಗೂ ಎಚ್ಚೆತ್ತುಕೊಂಡು ಗುಲ್ಬರ್ಗಾ ವಿವಿ, ಸಿಂಧನೂರು ಹಾಗೂ ಲಿಂಗಸುಗೂರು ತಾಲೂಕಿನ ಸ್ನಾತಕೋತ್ತರ ಕಾಲೇಜ್‌ಗಳನ್ನು ಸೇರಿಸಿ ಪ್ರಥಮ ದರ್ಜೆ ಕಾಲೇಜಿಗೆ ಪರೀಕ್ಷಾ ಕೇಂದ್ರ ಮಂಜೂರು ಮಾಡಿದೆ.

ರಾಯಚೂರಿಗೆ ಸ್ನಾತಕೋತ್ತರ ಕ್ಲಸ್ಟರ್ ಮಟ್ಟದ ಪರೀಕ್ಷಾ ಕೇಂದ್ರ ನೀಡಿದ್ದು ಅವೈಜ್ಞಾನಿಕವಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮನವಿ ಹಾಗೂ ಪತ್ರಿಕೆಗಳ ವರದಿಗೆ ಸ್ಪಂದಿಸಿ ಗುಲ್ಬರ್ಗಾ ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದೆ. ದೂರವಾಣಿಯಲ್ಲಿ ಮಾತನಾಡಿ ಶೀಘ್ರವೇ ಸಿಂಧನೂರಿಗೆ ಪರೀಕ್ಷಾ ಕೇಂದ್ರ ಮಂಜೂರು ಮಾಡುವಂತೆ ಸೂಚಿಸಿದ್ದೆ. ಪರೀಕ್ಷಾ ಕೇಂದ್ರ ಮಂಜೂರಾಗಿದೆ.
| ವೆಂಕಟರಾವ್ ನಾಡಗೌಡ ಜಿಲ್ಲಾ ಉಸ್ತುವಾರಿ ಸಚಿವ