ಸಿಂಧನೂರು: ಭೂಮಿಗೆ ಸಮತೋಲನ ಪೋಷಕಾಂಶ ನೀಡಿದಾಗ ಮಾತ್ರ ಇಳುವರಿ ಕಾಪಾಡಿಕೊಳ್ಳಬಹುದು ಎಂದು ಬೆಂಗಳೂರು ಕೃಷಿ ವಿವಿಯ ಆಡಳಿತ ಮಂಡಳಿ ನಿರ್ದೇಶಕ, ವಿಶ್ರಾಂತ ಕೃಷಿ ವಿಜ್ಞಾನಿ ಡಾ.ಪ್ರಭಾಕರ ಹೇಳಿದರು.
ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೋಳ ಬೆಳೆ ವೀಕ್ಷಿಸಿ, ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಜೋಳದ ಬೆಳೆಯನ್ನು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಬೇಕು. ತಡವಾಗಿ ಬಿತ್ತನೆ ಮಾಡಿದರೆ ನಾನಾ ರೋಗಗಳು ಬರುತ್ತವೆ. ಆದರೆ ಈ ಭಾಗದಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಗಸ್ಟ್‌ನಲ್ಲಿ ಬಿತ್ತನೆ ಮಾಡಿ ಇಷ್ಟೊಂದು ಉತ್ಕೃಷ್ಟವಾದ ಬೆಳೆ ಬಂದಿರುವುದು ಆಶ್ಚರ್ಯವಾಗಿದೆ. ಇದರ ಮೇಲೆ ಸಂಶೋಧನೆಗಳು ನಡೆಯಬೇಕಿದೆ. ರೈತರ ಅನುಭವಗಳನ್ನು ಪಡೆದುಕೊಳ್ಳಬೇಕಿದೆ ಎಂದರು.
ಜೋಳಕ್ಕೆ ನಿಗದಿಗಿಂತ ಹೆಚ್ಚಿನ ಗೊಬ್ಬರ ಬಳಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಎಷ್ಟು ಗೊಬ್ಬರ ಹಾಕಬೇಕು ? ಯಾವಾಗ ಹಾಕಬೇಕು? ಎನ್ನುವುದು ಸಂಶೋಧಕರ ಮಾರ್ಗದರ್ಶನ ಪಡೆಯಬೇಕು. ಹೆಚ್ಚು ಗೊಬ್ಬರ ಹಾಕಿದರೆ ಮಣ್ಣಿನ ಪೋಷಕಾಂಶಗಳು ಕುಸಿದು, ಫಲವತ್ತತೆ ಕಡಿಮೆಯಾಗುತ್ತದೆ ಎಂದರು.
ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಕ್ಕೆ ಆಹಾರ ಭದ್ರತೆ ಒದಗಿಸಬೇಕು. ಇದರಿಂದ ರೈತರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯ. ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಸರ್ಕಾರಕ್ಕೂ ಹಣದ ಉಳಿತಾಯವಾಗಬೇಕು ಎನ್ನುವ ನಿಟ್ಟಿನಲ್ಲಿ ಜೋಳ ಹಾಗೂ ರಾಗಿಯನ್ನು ಸರಕಾರವೇ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಯೋಜನೆ ರೂಪಿಸಿ ಜಾರಿಗೆ ತರಲಾಗಿದೆ. ಪ್ರಸ್ತುತ ಹೈಬ್ರಿಡ್ ಜೋಳದ ಬೀಜಗಳನ್ನು ಖಾಸಗಿ ಕಂಪನಿಗಳು ತಯಾರಿಸುತ್ತವೆ. ಯಾಕೆ ಕೃಷಿ ವಿವಿ ಹೈಬ್ರಿಡ್ ಬೀಜ ಉತ್ಪಾದನೆ ಮಾಡಲು ಸಾಧ್ಯವೇ ಎನ್ನುವ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ವಿಚಾರ ಸಂಕಿರಣ ಉದ್ಘಾಟಿಸಿದರು. ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಉಟಕನೂರಿನ ಮರಿಬಸವರಾಜ ಸ್ವಾಮೀಜಿ, ಲಿಂಗಸುಗೂರು ಸಹಾಯಕ ಆಯುಕ್ತ ಬಸಣ್ಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಅರುಣ್ ದೇಸಾಯಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ, ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್, ವೀರನಗೌಡ ಬಾದರ್ಲಿ ಸೇರಿ ಕೃಷಿ ವಿವಿ ವಿಜ್ಞಾನಿಗಳು, ಕೃಷಿ ಸಂಶೋಧಕರು, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.