ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸಿ

ಕಾರ್ಮಿಕ ಮುಖಂಡ ಚಿನ್ನಪ್ಪ ಕೊಟ್ರಕಿ ಮನವಿ | ವಿಶ್ವ ಕಾರ್ಮಿಕ ದಿನಾಚರಣೆ

ಸಿಂಧನೂರು: ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಅಂದಾಗ ಮಾತ್ರ ಅವರ ಬದುಕು ಹಸನಾಗಲು ಸಾಧ್ಯ ಎಂದು ಕಾರ್ಮಿಕ ಮುಖಂಡ ಚಿನ್ನಪ್ಪ ಕೊಟ್ರಕಿ ಹೇಳಿದರು.

ನಗರದ ಹೊಸ ಗಂಜ್‌ನಲ್ಲಿರುವ ಶ್ರಮಿಕ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 133ನೇ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೂಲಿ ಮಾಡುವ ಮೂಲಕ ಕಾರ್ಮಿಕರು ಬೆವರು ಸುರಿಸಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ, ಇವರ ಶ್ರಮದಿಂದ ಮಾಲೀಕರು, ಬಂಡವಾಳಶಾಹಿಗಳು ಶ್ರೀಮಂತರಾಗುತ್ತಾರೆ. ಕಾರ್ಮಿಕರು ಮಾತ್ರ ಕಾರ್ಮಿಕರಾಗಿಯೇ ಉಳಿಯುತ್ತಾರೆ. ಇಂಥ ವಂಚನೆ ನಿಲ್ಲಬೇಕಾದರೆ ಕಾರ್ಮಿಕರೆಲ್ಲರೂ ಒಗ್ಗಟ್ಟಾಗಬೇಕು ಎಂದರು.

ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಉಪಾಧ್ಯಕ್ಷ ಎಂ.ಡಿ.ಅಮೀರ್‌ಅಲಿ, ಮಾಬುಸಾಬ್ ಬೆಳ್ಳಟ್ಟಿ, ಎಸ್.ಆರ್.ಹೊಸಮನಿ, ಹನುಮೇಶ ಗಿಣಿವಾರ, ಎಂ.ಗಂಗಾಧರ, ಲಕ್ಷ್ಮಮ್ಮ, ರಾಜಾಸಾಬ್ ಮುದಗಲ್, ಅಡವಿರಾವ್ ಇದ್ದರು.

ಬೃಹತ್ ಮೆರವಣಿಗೆ: ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ಹಾಗೂ ಟಿಯುಸಿಐ ಸಿಂಧನೂರು ತಾಲೂಕು ಘಟಕದಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಿತು. ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ವಿವಿಧ ವೃತ್ತದ ಮೂಲಕ ಹೊಸ ಗಂಜ್‌ನ ಶ್ರಮಿಕ ಭವನ ತಲುಪಿತು. ಮೆರವಣಿಗೆಯುದ್ದಕ್ಕೂ ಕಾರ್ಮಿಕ ಪರ ಘೋಷಣೆಗಳು ಮೊಳಗಿದವು.

Leave a Reply

Your email address will not be published. Required fields are marked *