36ನೇ ಉಪ ಕಾಲುವೆ ಕೆಳಭಾಗಕ್ಕೆ ನೀರು ಹರಿಸಿ

ಶ್ರೀಪುರಂಜಂಕ್ಷನ್‌ನಲ್ಲಿ ನೂರಾರು ರೈತರಿಂದ ಸಂಚಾರ ತಡೆ

ಸಿಂಧನೂರು: ತಾಲೂಕಿನ 36ನೇ ಉಪ ಕಾಲುವೆ ಕೆಳಭಾಗಕ್ಕೆ ನೀರು ಹರಿಸಲು ಒತ್ತಾಯಿಸಿ ಕೆಳಭಾಗದ ನೂರಾರು ರೈತರು ಶ್ರೀಪುರಂಜಂಕ್ಷನ್‌ನ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ರಸ್ತೆ ಸಂಚಾರ ತಡೆ ನಡೆಸಿದರು.

ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಬಿಟ್ಟು ತಿಂಗಳು ಕಳೆದರೂ ಈವರೆಗೆ ಹನಿ ನೀರು ಬಂದಿಲ್ಲ. ಮೇಲ್ಭಾಗದಲ್ಲಿ ಈಗಾಗಲೇ ಭತ್ತ ನಾಟಿ ನಡೆದಿದೆ. ಕೆಳ ಭಾಗದಲ್ಲಿ ನೀರಿಲ್ಲದ್ದರಿಂದ ಬಿತ್ತನೆ ಸಾಧ್ಯವಾಗಿಲ್ಲ. ಗೊರೇಬಾಳ, ಗೊರೇಬಾಳ ಕ್ಯಾಂಪ್, ಸಾಸಲಮರಿ, ಸಾಸಲಮರಿಕ್ಯಾಂಪ್, ಮಲ್ಕಾಪುರ, ಮಲ್ಕಾಪುರಕ್ಯಾಂಪ್, ಬೂದಿಹಾಳ ವ್ಯಾಪ್ತಿಯ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆದಿಲ್ಲ ಎಂದು ರೆತರು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಪುರಂಜಂಕ್ಷನ್‌ನ ಬಳಿ ಸಿಂಧನೂರು, ಬಳ್ಳಾರಿ, ಗಂಗಾವತಿ ರಸ್ತೆಯಲ್ಲಿ ಸಂಚಾರ ತಡೆ ನಡೆಸಿದರು. 2 ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು.

ಜಿಪಂ ಸದಸ್ಯ ಬಸವರಾಜ ಹಿರೇಗೌಡರ್ ಮಾತನಾಡಿ, ಮೂರ‌್ನಾಲ್ಕು ವರ್ಷಗಳಿಂದ ರೈತರು ಒಂದು ಬೆಳೆಗಾಗಿ ತೀವ್ರ ಪರದಾಡುವಂತಾಗಿದೆ. ಜಲಾಶಯದಿಂದ ನೀರು ಬಿಟ್ಟರೂ ಕೆಳಭಾಗದ ಕಾಲುವೆಗೆ ನೀರು ಬಂದಿಲ್ಲ. ಕೂಡಲೇ ನೀರಾವರಿ ಅಧಿಕಾರಿಗಳು ಕೆಳಭಾಗಕ್ಕೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಭೀಮನಗೌಡ ಗೊರೇಬಾಳ, ರಂಗನಗೌಡ ಗೊರೇಬಾಳ, ಶರಣೇಗೌಡ ಸಾಸಲಮರಿ, ರಾಮಣ್ಣ, ವೆಂಕೋಬ, ರಂಗರೆಡ್ಡಿ ಸಾಸಲಮರಿ, ವೆಂಕನಗೌಡ, ಡಿ.ಪ್ರಸಾದ, ದೊರೆಸ್ವಾಮಿ ನಾಯ್ಡು, ಮುದುಕಣ್ಣ ಸುರುಳಿ, ಭೀಮಣ್ಣ ವಟಗಲ್, ಮುರಳಿ ಮಲ್ಕಾಪುರ ಕ್ಯಾಂಪ್, ಸತೀಶ, ಬಸವರಾಜ ಅಮರಾಪುರ, ಬಸವರಾಜಗೌಡ, ಪುಟ್ಟರಂಗರಾವ್ ಇತರರಿದ್ದರು.

Leave a Reply

Your email address will not be published. Required fields are marked *