ಬಾಂಗ್ಲಾ ವಲಸಿಗರಿಗೆ ಪೌರತ್ವ | ಸಂಸದ ಸಂಗಣ್ಣ ಕರಡಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ರಿಗೆ ಪತ್ರ
ಸಿಂಧನೂರು: ತಾಲೂಕಿನ ಬಾಂಗ್ಲಾ ಐದು ಪುನರ್ವಸತಿ ಕ್ಯಾಂಪ್‌ಗಳ ಜನರಿಗೆ ಪೌರತ್ವ ಪ್ರಮಾಣಪತ್ರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಕರೆಸಲು ಕೊಪ್ಪಳ ಲೋಕಸಭೆ ಸದಸ್ಯ ಸಂಗಣ್ಣ ಕರಡಿ ಪತ್ರವ್ಯವಹಾರ ನಡೆಸಿದ್ದಾರೆ.
1971 ರ ಬಾಂಗ್ಲಾ ವಿಮೋಚನಾ ಸಂದರ್ಭ ನಿರಾಶ್ರಿತಗೊಂಡಿದ್ದ ಬಾಂಗ್ಲಾ ಜನರಿಗೆ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಸಿಂಧನೂರು ತಾಲೂಕಿನಲ್ಲಿ ಪುನವರ್ಸತಿ ಕ್ಯಾಂಪ್‌ನಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದ್ದರು. ನಿರಾಶ್ರಿತರ ಯೋಜನೆಯಡಿ ಆಗ ಬಂದ ಎಲ್ಲರಿಗೂ ಪೌರತ್ವ ಸೇರಿ ಸರ್ಕಾರದ ಎಲ್ಲ ಸೌಲತ್ತುಗಳು ಸಿಕ್ಕಿದ್ದವು. 1978ರಲ್ಲಿ ಬಂದಂಥ 200ಕ್ಕೂ ಅಧಿಕ ಕುಟುಂಬಗಳು ಪೌರತ್ವದಿಂದ ವಂಚಿತಗೊಂಡಿದ್ದರು. ಇದರಿಂದ ಯಾವ ಸೌಲಭ್ಯಗಳು ಅವರಿಗೆ ಸಿಕ್ಕಿರಲಿಲ್ಲ.
ಕ್ಯಾಂಪಿನ ನಿವಾಸಿಗಳ ಸತತ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಈ ಬಾಂಗ್ಲಾ ನಿವಾಸಿಗಳಿಗೆ ಪೌರತ್ವ ನೀಡುವ ನಿರ್ಣಯ ಕೈಗೊಂಡಿತ್ತು. ಕ್ಯಾಂಪ್‌ಗಳ 200 ಕುಟುಂಬಗಳು ಈ ನಿರ್ಧಾರವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡಿವೆ.
ಈ ಐತಿಹಾಸಿಕ ನಿರ್ಧಾರವನ್ನು ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರಚಾರಪಡಿಸುವ ಉದ್ದೇಶ ಹೊಂದಿ ಸಂಸದ ಸಂಗಣ್ಣ ಕರಡಿಯವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ಗೆ ಪತ್ರ ಬರೆದಿದ್ದಾರೆ. ಹಾಗೊಂದು ವೇಳೆ ಒಪ್ಪಿಗೆ ಸಿಕ್ಕಲ್ಲಿ ಜ.15, 2020 ರೊಳಗಾಗಿ ಪ್ರಮಾಣಪತ್ರ ವಿತರಣೆ ಸಮಾರಂಭಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಬರುವ ನಿರೀಕ್ಷೆ ಇದೆ.
ಡಿ.31ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ರಿಗೆ ಪತ್ರ ಬರೆದಿದ್ದು ಸಿಂಧನೂರು ತಾಲೂಕಿನ ಬಾಂಗ್ಲಾ ಪುನರ್ವಸತಿಕ್ಯಾಂಪ್‌ನಲ್ಲಿ ಪೌರತ್ವ ಪ್ರಮಾಣಪತ್ರ ವಿತರಣೆ ಸಮಾರಂಭಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುವ ದಿನಾಂಕ ನಿಗದಿ ಮಾಡಬೇಕೆಂದು ಕೋರಲಾಗಿದೆ. ನಮಗೂ ಅವರು ಒಪ್ಪಿಗೆ ಸೂಚಿಸುವ ಭರವಸೆ ಇದೆ.
| ಸಂಗಣ್ಣ ಕರಡಿ ಸಂಸದ, ಲೋಕಸಭೆ ಕ್ಷೇತ್ರ ಕೊಪ್ಪಳ