ತೋಟದಲ್ಲಿ ಜೋಡಿ ಕೊಲೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ತೋಟವೊಂದರಲ್ಲಿ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಪರಮಾನಂದ ಭೋಜಪ್ಪ ಧರಿಕರ (22), ಅಶೋಕ ಗುರಣ್ಣ ಚೌಧರಿ (25) ಮೃತ ದುರ್ದೈವಿಗಳು. ಗಾಢ ನಿದ್ರೆಯಲ್ಲಿದ್ದ ಇಬ್ಬರನ್ನು ಸಹೋದರರೆಂದು ಭಾವಿಸಿ ಹಂತಕರು ಕೊಲೆ ಮಾಡಿದ್ದಾರೆ. ಇವರನ್ನು ಬಿಟ್ಟು ದೂರದಲ್ಲಿ ಮಲಗಿದ್ದ ಸಿದ್ದಣ್ಣ ಭೋಜಪ್ಪ ಧರಿಕರ ಈ ದುರ್ಘಟನೆಯಲ್ಲಿ ಪಾರಾಗಿದ್ದಾರೆ. ತೋಟಕ್ಕೆ ಮಲಗಲು ಬಂದಿದ್ದ ಅಮಾಯಕ ಅಶೋಕ ಗುರಣ್ಣ ಚೌಧರಿ ಪರಮಾನಂದನ ಜತೆಗೆ ಶವವಾಗಿದ್ದಾನೆ.

ಆಸ್ತಿ ವಿವಾದವೇ ಕೊಲೆಗೆ ಕಾರಣ ಎನ್ನಲಾಗಿದೆ. ಗ್ರಾಮದ 2 ಕಿ.ಮೀ. ದೂರದಲ್ಲಿ ಅಂದಾಜು 75 ಎಕರೆ ಜಮೀನಿದ್ದು, ಮೂರು ಮಂದಿಗೆ ಮಾರಾಟವಾಗಿದೆ ಎನ್ನಲಾಗಿದೆ. ಈ ಕುರಿತು ಸಿಂದಗಿ ನ್ಯಾಯಾಲಯದಲ್ಲಿ ವ್ಯಾಜ್ಯ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭೋಜಪ್ಪ ಮಡಿವಾಳಪ್ಪ ಧರಿಕರ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಲೆಯಿಂದ ಇಡೀ ಚಾಂದಕವಠೆ ಗ್ರಾಮ ತಲ್ಲಣಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ 9 ಅರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿವೈಎಸ್‌ಪಿ ಎಂ.ಬಿ. ಸಂಕದ, ಸಿಪಿಐ ಎಂ.ಕೆ. ದಾಮಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.