ಜಯಘೋಷಗಳೊಂದಿಗೆ ಅದ್ದೂರಿ ಗೋಲ್ಲಾಳೇಶ್ವರ ರಥೋತ್ಸವ

ಸಿಂದಗಿ: ತಾಲೂಕಿನ ಎರಡನೇ ಶ್ರೀಶೈಲ ಎಂಬ ಖ್ಯಾತಿಯ ಸುಕ್ಷೇತ್ರ ಗೊಲ್ಲಾಳೇಶ್ವರ ಮಹಾರಥೋತ್ಸವ ಲಕ್ಷಾಂತರ ಭಕ್ತ ಸಮೂಹದ ಜಯ ಘೋಷ ಮಧ್ಯೆ ಶುಕ್ರವಾರ ಸಂಜೆ ನೆರವೇರಿತು.

ದೇವಸ್ಥಾನದ ಧರ್ಮದರ್ಶಿ ಶಿವಶಂಕ್ರೆಪ್ಪನವರ ದೇವರಮನಿ, ವರಪುತ್ರ ಹೊಳ್ಳೆಪ್ಪಶರಣರು ದೇವರಮನಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರಿಂದ ಗೊಲ್ಲಾಳೇಶ್ವರ ಜಯಘೋಷಗಳು ಮೊಳಗಿದವು.

ಗೊಲ್ಲಾಳೇಶ್ವರ ಜಾತ್ರೆಗೆ ನೂರಾರು ಭಕ್ತರು ಶುಕ್ರವಾರ ನಸುಕಿನ ಜಾವದಿಂದಲೇ ಪಾದಯಾತ್ರೆ ಮೂಲಕ ಸುಕ್ಷೇತ್ರಕ್ಕೆ ಆಗಮಿಸಿದ್ದರು. ಬೆಳಿಗ್ಗೆ ದೇವಸ್ಥಾನದಲ್ಲಿ ಅಭಿಷೇಕ ವಿಶೇಷ ಪೂಜೆ ಇತರೆ ಕಾರ್ಯಕ್ರಮಗಳು ಜರುಗಿದವು. ಸಂಜೆ ಸಕಲ ವಾದ್ಯ ವೈಭವಗಳೊಂದಿಗೆ ಲಕ್ಷಾಂತರ ಭಕ್ತರ ನಡುವೆ ಗೊಲ್ಲಾಳೇಶ್ವರ ಪಲ್ಲಕ್ಕಿ ಮೆರವಣಿಗೆ ಹಾಗೂ ಭವ್ಯ ರಥೋತ್ಸವ ಜರುಗಿತು.

ಉತ್ತರ ಕರ್ನಾಟಕದಲ್ಲಿಯೇ ಅತಿ ಎತ್ತರವಾದ ಈ ರಥೋತ್ಸವವು ನೋಡುಗರ ಕಣ್ಮನ ತುಂಬಿತು. ಕಲಕೇರಿ ಪೊಲೀಸ್ ಠಾಣೆ ಪಿಎಸ್‌ಐ ಎನ್.ಆರ್. ಕೀಲಾರೆ ಹಾಗೂ ಸಿಂದಗಿ ಪೊಲೀಸ್ ಠಾಣೆ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

Leave a Reply

Your email address will not be published. Required fields are marked *