ಸಿಂದಗಿ ಆಸ್ಪತ್ರೆಯ ಆರ್‌ಓ ಘಟಕಕ್ಕೂ ಅನಾರೋಗ್ಯ

ಮಲ್ಲಿಕಾರ್ಜುನ ಎನ್. ಕೆಂಭಾವಿ
ಸಿಂದಗಿ: ಸಾಹೇಬ್ರ ಬಾಣಂತಿಗಿ ಕುಡಿಲಾಕ್ ನೀರ್ ಸಿಗುವಲ್ದು. ಒಮ್ಮೆ ರೊಕ್ಕ ಇರ‌್ತಾವ್..ಇನ್ನೊಮ್ಮೆ ಇರಲ್ಲ. ರೊಕ್ಕ ಇದ್ರ ಮಾತ್ರ ನಮ್ ಮಗಳ ಗಂಟಲಕ ನೀರ ಬೀಳ್ತಾವ್.. ಎಂಬುದನ್ನು ಹೆರಿಗೆ ವಿಭಾಗದಲ್ಲಿ ಬಾಣಂತಿಯರಿಗೆ ಸಹಾಯಕರಾಗಿ ಬಂದವರಿಂದ ಕೇಳಿ ಬಂದ ಮಾತುಗಳಿವು.

ಒಂದೂವರೆ ವರ್ಷದ ಹಿಂದೆ ನಿರ್ಮಿಸಲಾದ ಕುಡಿಯುವ ನೀರಿನ ಘಟಕ ಇಂದಿಗೂ ಅನಾರೋಗ್ಯ ಪೀಡಿತವಾಗಿದ್ದು, ರೋಗಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಹೆರಿಗೆಗೆ ದಾಖಲಾದ ಹೆಣ್ಣು ಮಕ್ಕಳ ಆರೋಗ್ಯ ಸ್ವಚ್ಛ ಹಾಗೂ ಶುಚಿತ್ವದಿಂದ ಕಾಪಾಡಬೇಕೆಂಬುದು ಬರೀ ಮಾತಾಗಿಯೇ ಉಳಿದಿದ್ದು, ನಿತ್ಯ ಬಳಕೆಗೆ ಅಗತ್ಯವಿರುವಷ್ಟು ನೀರು ಅವರಿಗೆ ಸಿಗದೆ ಗೋಳಾಡುವ ಸ್ಥಿತಿ ಇದೆ. ಇಂತಹ ಸ್ಥಿತಿಗೆ ತಮ್ಮ ಸಂಕಷ್ಟಕ್ಕೆ ತಾವೇ ಶಪಿಸಿಕೊಂಡು ಸಿಬ್ಬಂದಿ ತರಾಟೆಗೆ ತೆಗೆದುಕೊಂಡ ಎಷ್ಟೋ ಉದಾಹರಣೆಗಳಿವೆ. ಇನ್ನು ಸಿಬ್ಬಂದಿಗೂ ಕುಡಿಯುವ ನೀರಿಲ್ಲ. ಜತೆಗೆ ರೋಗಿಗಳ ಔಷಧೋಪಚಾರ ಮಾಡಿ, ಕೈ ತೊಳೆಯಲು ಆಸ್ಪತ್ರೆ ಹೊರಗಿನ ಹೋಟೆಲ್‌ಗಳಿಗೆ ಅಲೆದಾಡುವಂತಾಗಿದೆ.

ಆಸ್ಪತ್ರೆಯಲ್ಲಿ ನಿತ್ಯ ಬಳಕೆ ನೀರಿಗಾಗಿ ದಿನವೊಂದಕ್ಕೆ ಅಂದಾಜು 1500 ರೂ. ಖರ್ಚು ಮಾಡಿ 2 ಟ್ಯಾಂಕರ್ ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದು, ಅದೇ ನೀರನ್ನು ಡಯಾಲಿಸಿಸ್ ಮತ್ತು ಹೆರಿಗೆ ವಿಭಾಗದ ಕೆಲಸಗಳಿಗಾಗಿ ಬಳಸಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಒಂದು ಬೋರ್‌ಗೆ ನೀರಿನ ಮೂಲದ ಕೊರತೆಯಿದ್ದರೆ, ಸ್ಥಳೀಯ ಆಡಳಿತದಿಂದ ಕೊರೆಯಿಸಲಾದ ಇನ್ನೊಂದು ಕೊಳವೆಬಾವಿಗೆ ಮೋಟಾರ್ ಕೂಡಿಸದಿರುವುದೇ ಸಮಸ್ಯೆ ಯಾಗಿದೆ. ನೀರಿನ ಮೂಲವಿರುವ ಮೋಟಾರ್ ಇಲ್ಲದ ಕೊಳವೆಬಾವಿಗೆ ಮೋಟಾರ್ ಅಳವಡಿಸುವಂತೆ ಆಸ್ಪತ್ರೆ ಅಧಿಕಾರಿಗಳು ಪತ್ರ ಮುಖೇನ ಮನವಿ ಮಾಡಿದರೂ ಸ್ಥಳೀಯ ಪುರಸಭೆ ಹಾಗೂ ತಾಲೂಕು ಆಡಳಿತಕ್ಕೆ ಇನ್ನೂ ಕರುಣೆ ಬಂದಿಲ್ಲ. ಸಮಸ್ಯೆ ನೀಗಿಸುವ ಮನಸು ಮಾಡಿಲ್ಲ.

ಗ್ರಾಮೀಣ ಕುಡಿಯುವ ನೀರು ಇಲಾಖೆಯ ಎಇಇ ಜಿ.ಎಸ್. ಸೂರ್ಯವಂಶಿ ಅವರೊಂದಿಗೆ ಗುರುವಾರ ದೂರವಾಣಿಯೊಂದಿಗೆ ಮಾತಾಡಿದ್ದೇನೆ. ಕೊರೆಯಿಸಲಾದ ಕೊಳವೆಬಾವಿಗೆ ಶೀಘ್ರ ಮೋಟಾರ್ ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ. ನಂತರದಲ್ಲಿ ಆಸ್ಪತ್ರೆಯಲ್ಲಿನ ಆರ್.ಓ. ಪ್ಲಾಂಟ್ ಆರಂಭಿಸಿ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.
ಆರ್.ಎಸ್. ಇಂಗಳೆ ತಾಲೂಕು ವೈದ್ಯಾಧಿಕಾರಿ, ಸಿಂದಗಿ