ರೈತರ ಸಮಸ್ಯೆ ನಿವಾರಿಸಿ

ಸಿಂದಗಿ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ತೋಟಗಾರಿಕೆ ಇಲಾಖೆಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತೋಟಗಾರಿಕೆ ಇಲಾಖೆ ಮುಂಭಾಗ ಬಹಿರಂಗ ಸಭೆ ನಡೆಸಿ ಶಿರಸ್ತೆದಾರ್ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಅಧಿಕಾರಿಗಳು ರೈತರಿಗೆ ಯಾವುದೇ ಸೌಲಭ್ಯಗಳ ಮಾಹಿತಿ ನೀಡುತ್ತಿಲ್ಲ. ಏಜೆಂಟ್‌ರೊಂದಿಗೆ ಶಾಮೀಲಾಗಿ ವಿವಿಧ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹನಿ ಮತ್ತು ತುಂತುರು ನೀರಾವರಿ ಯೋಜನೆಗೆ ಏಜೆನ್ಸಿಯವರು ರೈತರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ.

ಡ್ರಿಪ್ ಯೋಜನೆಯಲ್ಲಿ ಲಾನುಭವಿಗಳು ಶೇ.10 ರಷ್ಟು ಮಾತ್ರ ಹಣ ತುಂಬಬೇಕು. ಇನ್ನುಳಿದ ಶೇ.90 ರಷ್ಟು ಹಣ ಸರ್ಕಾರ ತುಂಬುತ್ತದೆ. ಆದರೆ ಸ್ಥಳೀಯ ಡ್ರಿಪ್ ಏಜೆನ್ಸಿಯವರು ಶೇ.20 ರಷ್ಟು ಹಣ ನೀಡಬೇಕೆಂದು ಒತ್ತಾಯಿಸುತ್ತಾರೆ. ಇಂತಹ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲಾಖೆಯ ವೀರೇಶ ಕಟ್ಟಿ ಹಾಗೂ ಚಿದಾನಂದ ಬೂದಿಹಾಳ ಎಂಬುವವರು ರೈತರಿಗೆ ಕಣ್ಣೀರು ತರಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಸಚಿವರ ತಾಲೂಕಿನಲ್ಲೇ ರೈತರಿಗೆ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಬಸವನಬಾಗೇವಾಡಿ ತಾಲೂಕು ಅಧ್ಯಕ್ಷ ಸಿದ್ರಾಮ ಅಂಗಡಗೇರಿ, ಸಿಂದಗಿ ತಾಲೂಕು ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಬಾಬು ಕೂಡಿ, ಅಮೃತ ಸಿಂಗ್ರಿ, ಅನಿಲ ತೇಲಿ, ಅರ್ಜುನ ಸಾವಳಸಂಗ, ಪ್ರಶಾಂತ ಪಾಟೀಲ ಮತ್ತಿತರರು ಇದ್ದರು.