ಸಿಂದಗಿ ಕೆರೆಗೆ ಸೇರಿಲ್ಲ ನೀರು

ಸಿಂದಗಿ: ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ಮತ್ತೆ ಪೈಪ್‌ಲೈನ್ ಒಡೆದಿದ್ದು ಆಲಮಟ್ಟಿ ಜಲಾಶಯದಿಂದ ಪಟ್ಟಣದ ಕೆರೆಗೆ ಸೇರಬೇಕಿದ್ದ ನೀರು ಪೋಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಒಂದು ಬಾರಿ ಪಟ್ಟಣದ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲಾಶಯದಿಂದ ಹೆಚ್ಚುವರಿ ನೀರು ಹರಿಸಲಾಗಿತ್ತು. ಆಗಲೂ ಜೇವರಗಿ ರಸ್ತೆಯ 7 ಕಿ.ಮೀ ಮೈಲಿಗಲ್ಲಿನ ಬಳಿಯ ಹಾದಿ ಬಸವಣ್ಣನ ಗುಡಿ ಹತ್ತಿರದ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು. ಆಗ ನಿಗದಿತ ಪ್ರಮಾಣದ ನೀರನ್ನು ಕೆರೆಗೆ ತುಂಬಿಸಲು ಸಾಧ್ಯವಾಗದೆ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು.

ಈ ಬಾರಿ ಶುಕ್ರವಾರ ಸಚಿವ ಎಂ.ಸಿ. ಮನಗೂಳಿ 2ನೇ ಬಾರಿ ಹೆಚ್ಚುವರಿಯಾಗಿ ಆಲಮಟ್ಟಿ ಜಲಾಶಯದಿಂದ 1.5 ಟಿಎಂಸಿ ನೀರು ಕಾಲುವೆಗೆ ಬಿಡಿಸಿದ್ದರೂ ಪುರಸಭೆ ಅಧಿಕಾರಿಗಳ ಮತ್ತದೇ ನಿರ್ಲಕ್ಷೃದಿಂದಾಗಿ ನೀರು ಸೋರಿಕೆಯಾಗಿದೆ. ತಾಲೂಕಿನ ಯರಗಲ್ ಬಳಿಯ ಜಾಕ್‌ವೆಲ್ ಮೂಲಕ ಶುಕ್ರವಾರ ಪಟ್ಟಣದ ಕೆರೆಗೆ ನೀರು ಹರಿಬಿಡಲಾಗಿತ್ತು. ಕೆರೆಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದನ್ನು ಸಿಬ್ಬಂದಿ ಗಮನಿಸಿ ಪೈಪ್‌ಲೈನ್ ಸೋರುವ ಬಗ್ಗೆ ತಿಳಿಸಿದ್ದಾರೆ. ಇವರ ಮಾತಿಗೆ ಕಿವಿಗೊಡದ ಅಧಿಕಾರಿಗಳು ನೋಡೋಣ ಎಂದು ತಲೆ ಅಲ್ಲಾಡಿಸಿ ಬೇಜವಾಬ್ದಾರಿ ತೋರ್ಪಡಿಸಿ ಸುಮ್ಮನಾಗಿದ್ದಾರೆ.

ನಂತರ ಸಾರ್ವಜನಿಕರು ಪಟ್ಟಣದ ಜಕ್ಕಪ್ಪಯ್ಯನ ಮಠದ ಬಳಿಯ ಬ್ರಿಜ್ ಕೆಳಗೆ ನೀರು ಪೋಲಾಗುತ್ತಿರುವ ಬಗ್ಗೆ ದೂರು ನೀಡಿದಾಗಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಪಂಪ್‌ಹೌಸ್‌ನಿಂದ ಮೋಟರ್ ಬಂದು ಮಾಡಿಸಿ ನೀರು ಪೋಲಾಗುತ್ತಿರುವುದನ್ನು ಗಮನಿಸಿ ಶನಿವಾರ ದುರಸ್ಥಿಗೆ ಮುಂದಾಗಿದ್ದಾರೆ.

ಶುಕ್ರವಾರ ಸಂಜೆ ಕೆರೆಗೆ ನೀರು ಹರಿಬಿಟ್ಟರೂ ಅಂದಾಜು 4 ಗಂಟೆ ಕಾಲ ಮಾತ್ರ ಸಣ್ಣದಾಗಿ ಕೆರೆಗೆ ಬಂದಿದ್ದು ಜಲಾಶಯದ ನೀರಿನಿಂದ ಕೆರೆ ತುಂಬದೇ ಮತ್ತೆ ಕುಡಿಯುವ ನೀರಿಗಾಗಿ ಬಾಯಿ ಬಿಡುವಂತಾಗಿದೆ.

Leave a Reply

Your email address will not be published. Required fields are marked *