ಸಿಂದಗಿ: ಪಟ್ಟಣದ ಬೌದ್ಧ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಲಾಕ್‌ಡೌನ್ ಪರಿಣಾಮ ಎದುರಿಸುತ್ತಿರುವ ನಿರ್ಗತಿಕ ಕುಟುಂಬಗಳಿಗೆ ಸಂಘಪಾಲ ಬಂತೇಜಿ ಸಾನಿಧ್ಯದಲ್ಲಿ ಒಂದು ತಿಂಗಳ ದಿನಸಿ ಕಿಟ್ ವಿತರಿಸಲಾಯಿತು.
ನಂತರ ಮಾತನಾಡಿದ ಸಂಘಪಾಲ ಬಂತೇಜಿ, ಮಹಾಮಾರಿ ಕರೊನಾ ರೋಗ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದೆ. ಈ ಪರಿಣಾಮ ಬಹುತೇಕ ಬಡ ಕುಟುಂಬಗಳು ದಿನಸಿ ಇಲ್ಲದೆ, ಹಸಿವಿನಿಂದ ಬಳಲುತ್ತಿವೆ. ಈ ಪರಿಸ್ಥಿತಿಯಲ್ಲಿ ಉಳ್ಳವರು ಬಡವರ ಹೊಟ್ಟೆಗೆ ಅನ್ನ ಹಾಕುವ ಮೂಲಕ ಮಾನವೀಯತೆ ತೋರಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಯುವಕರು ಬಡವರ ಹೊಟ್ಟೆ ತುಂಬಿಸಲು ತಿಂಗಳವರೆಗೆ ಅಗತ್ಯವಿರುವ ದಿನಸಿ ಕಿಟ್ ವಿತರಿಸುವ ಮೂಲಕ ಮಾದರಿ ಮೆರೆದಿದ್ದಾರೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಡಾ. ಬಾಬಾಸಾಹೇಬರು ನಡೆದ ಹಾದಿಯಲ್ಲಿ ಮಾತ್ರ ನಾವು ಮಾನವೀಯ ಧರ್ಮವನ್ನು ಸಾಕಾರಗೊಳಿಸಬಹುದು. ಈ ದಿಸೆಯಲ್ಲಿ ಕರೊನಾ ರೋಗ ಭೀತಿಯಿಂದ ದೇಶದ ಲಾಕ್‌ಡೌನ್ ಮುಗಿಯುವವರೆಗೂ ಸ್ಥಳೀಯ ಬಡ ಕುಟುಂಬಗಳನ್ನು ಗುರುತಿಸಿ, ಕೈಲಾದಷ್ಟು ಸಹಾಯ ಹಸ್ತ ಚಾಚುವ ಕುರಿತು ಸಮಾನ ಮನಸ್ಕರಲ್ಲಿ ಚರ್ಚಿಸಿ, 50 ಕುಟುಂಬಗಳನ್ನು ಗುರುತಿಸಿ ಒಂದು ತಿಂಗಳವರೆಗಿನ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ ಎಂದರು. ಶರಣು ಸಿಂಧೆ, ಪರಶುರಾಮ ಕೂಚಬಾಳ ಮತ್ತಿತರರಿದ್ದರು.