ಸಿಂದಗಿ: ಭಾರತ ಲಾಕ್‌ಡೌನ್ ಪರಿಣಾಮ ಪಟ್ಟಣದ ನಿರ್ಗತಿಕರಿಗೆ ತಾಲೂಕಾಡಳಿತದಿಂದ ಬುಧವಾರ ದಿನಸಿ, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಪಟ್ಟಣದಲ್ಲಿ ನೆಲೆಯೂರಿರುವ 39 ಕುಟುಂಬಗಳಲ್ಲಿ 202ಕ್ಕೂ ಹೆಚ್ಚು ಜನರು ಬಯಲಲ್ಲೇ ವಾಸಿಸುತ್ತಿದ್ದಾರೆ. ಇಂಥ ಕುಟುಂಬಗಳನ್ನು ಗುರುತಿಸಿರುವ ತಾಲೂಕಾಡಳಿತ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಸಂಬಾರು ಪದಾರ್ಥ, ಕಾಯಿಪಲ್ಲೆಗಳ ಕಿಟ್‌ನ್ನು ತಹಸೀಲ್ದಾರ್ ಸಂಜೀವಕುಮಾರ ದಾಸರ ಆಯಾ ಕುಟುಂಬಸ್ಥರಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಬಡ ಕುಟುಂಬಗಳ ನೆರವಿಗೆ ನಿಲ್ಲಲು ಸೂಚನೆ ನೀಡಿತ್ತು. ಸೂಚನೆಯನ್ವಯ ಎರಡು ದಿನಗಳ ಹಿಂದೆ ಕಂದಾಯ ಅಧಿಕಾರಿಗಳಿಂದ ಸರ್ವೇ ಮಾಡಿಸಿ, ಅವರ ಅಗತ್ಯಗೆಗಳ ವಿವರ ಪಡೆಯಲಾಗಿತ್ತು. ಇಂಥ ಬಡ ಕುಟುಂಬಗಳ ಮನವೊಲಿಸಿ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಲು ಆಲೋಚಿಸಲಾಗಿತ್ತು. ಆದರೆ, ಆ ಕುಟುಂಬಗಳು ವಸತಿನಿಲಯಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದರಿಂದ ಅವರವರ ಗುಡಿಸಲುಗಳಿಗೆ ಆಹಾರ ಕಿಟ್ ವಿತರಿಸಿದ್ದೇವೆ. ಅಲ್ಲದೇ ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿದರೂ ಈ ಕುಟುಂಬಗಳಿಗೆ ಅಗತ್ಯ ಸೇವೆ ಒದಗಿಸುವುದಾಗಿ ಹೇಳಿದರು.
ಸರ್ಕಲ್ ಐ.ಎಂ. ಮಕಾಂನದಾರ್, ಅಲ್ಲಿನ ಕುಟುಂಬಗಳ ಬಗ್ಗೆ ಆರೋಗ್ಯ ಕಾಳಜಿ ವ್ಯಕ್ತಪಡಿಸಿ, ಕುಟುಂಬದ ಸದಸ್ಯರಿಗೆ, ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇತರೆ ಯಾವುದೇ ತೆರನಾದ ಅನಾರೋಗ್ಯವುಂಟಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು. ಯಾವುದೇ ಕಾರಣಕ್ಕೂ ರಸ್ತೆಗಿಳಿಯಬೇಡಿ ಎಂದು ಜಾಗೃತಿ ಮೂಡಿಸಿದರು.
ಶಿರಸ್ತೆದಾರ ಸಿ.ಬಿ. ಬಾಬಾನಗರ, ಆಲಮೇಲ ಸರ್ಕಲ್ ಎಂ.ಎ. ಅತ್ತಾರ್, ತಲಾಟಿ ರಾಮಪ್ಪ ರಾಂಪುರ, ಸಿದ್ದನಗೌಡ ಬಿರಾದಾರ, ಆರ್.ಎಸ್. ತಳವಾರ ಇದ್ದರು.
ಪುರಸಭೆ ಸದಸ್ಯರಿಂದಲೂ ಸಾಮಗ್ರಿ ವಿತರಣೆ
ಪುರಸಭೆಯ 18ನೇ ವಾರ್ಡಿನ ಸದಸ್ಯ ರಾಜಣ್ಣ ನಾರಾಯಣಕರ ತಮ್ಮ ವಾರ್ಡಿನ 135ಕ್ಕೂ ಹೆಚ್ಚಿನ ಬಡ ಕುಟುಂಬಸ್ಥರಿಗೆ ಬುಧವಾರ ಮನೆ ಮನೆಗೆ ತೆರಳಿ ದಿನಸಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಅಂಜುಮನ್ ಸಂಸ್ಥೆಯ ಮಹಿಬೂಬ ಹಸರಗುಂಡಗಿ, ಪುರಸಭೆ ಮಾಜಿ ಸದಸ್ಯ ಜಾಕೀರ್ ಮಕಾಂದಾರ್, ಪ್ರಕಾಶ ಸುಣಗಾರ, ಅನ್ನಪೂರ್ಣ ಹೊಟಗಾರ ಉಪಸ್ಥಿತರಿದ್ದರು.