ನಮ್ಮ ಮಕ್ಕಳು ಡ್ರಾಮಾ ಜ್ಯೂನಿಯರ್ಸ್‌ಗಳಾಗಲಿ

ಸಿಂದಗಿ: ರಂಗ ಶಿಬಿರಗಳು ಇಂದು ಹಲವಾರು ಪ್ರತಿಭೆಯುಳ್ಳವರನ್ನು ಗುರುತಿಸಿ, ಅವರಲ್ಲಿ ವಿವಿಧ ರೀತಿಯ ಸೃಜನಶೀಲತೆ ತುಂಬಿ ನಾಡಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅಭಿಪ್ರಾಯಪಟ್ಟರು.
ಪಟ್ಟಣದ ಶಾಂತೇಶ್ವರ ಹಿರಿಯ ಮಠದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಶಿವಾನಂದ ಸಿಂದಗಿ ಅವರ ರಂಗಸಾರಂಗ ಕಲಾ ವೇದಿಕೆಯ, ಹಂದಿಗನೂರ ಸಿದ್ರಾಮಪ್ಪನವರ ನೆನಪಿನ ಡ್ರಾಮಾ ಕ್ಯಾಂಪ್‌ನ 18 ದಿನಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಮೂರು ವಾರಗಳಲ್ಲೇ ಶಿಬಿರಾರ್ಥಿ ಮಕ್ಕಳಲ್ಲಿ ಸೃಜನಶೀಲತೆ ತುಂಬಿ, ಅವರ ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಿರುವುದು ಸವಾಲಿನ ಕಾರ್ಯ ಎಂದರು.
ಮಕ್ಕಳಲ್ಲಿ ಮುಗ್ಧತೆ ಎಷ್ಟಿರುತ್ತದೋ ಅದಕ್ಕೂ ಮಿಗಿಲಾದ ಪ್ರತಿಭೆ ಇರುತ್ತದೆ. ಈ ಡ್ರಾಮಾ ಕ್ಯಾಂಪ್ ಮೂಲಕ ನಾನಾ ಟಿವಿ ರಿಯಾಲಿಟಿ ಶೋಗಳಲ್ಲಿ ಡ್ರಾಮಾ ಕ್ಯಾಂಪ್‌ಗಳಲ್ಲಿ ನಮ್ಮ ಭಾಗದ ಮಕ್ಕಳು ಪಾಲ್ಗೊಂಡು ಉತ್ತಮ ಪ್ರತಿಭೆ ಹೊರಸೂಸಲಿ ಎಂಬ ಮಹಾದಾಶೆ ಹೊಂದಿರುವ ಶಿವಾನಂದ ಅವರ ತಂಡದ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದರು.
ಪಟ್ಟಣದ ಗುರುದೇವಾಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮುಗ್ಧ ಮಕ್ಕಳಲ್ಲಿನ ಪ್ರತಿಭೆ ಅಗಾಧವಾದುದು. ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಾಡಿದರೆ ಅವರು ರಂಗಭೂಮಿ ಸಾಧಕರಲ್ಲೊಬ್ಬರಾಗಬಲ್ಲರು ಎಂದರು.
ಡ್ರಾಮಾ ಕ್ಯಾಂಪ್ ಸಂಚಾಲಕ ಶಿವಾನಂದ ಸಿಂದಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ವಾರಗಳ ಕ್ಯಾಂಪ್‌ನಲ್ಲಿ ಮಕ್ಕಳಿಗೆ ಅಭಿನಯದ ಜತೆಗೆ ಅವರ ಮನಸ್ಸನ್ನು ಸೃಜನಶೀಲ ರಂಗ ಕಲೆಯತ್ತ ಹೊರಳುವಂತೆ ಮಾಡಿದ್ದೇವೆ. ಪಾಲಕರು ತಮ್ಮ ಮಕ್ಕಳ ಪ್ರತಿಭೆ ಕಾಣಲು ಬುದ್ಧ ಬೆಳದಿಂಗಳು ಸೇರಿ ಎರಡು ಡ್ರಾಮಾ ಪ್ರದರ್ಶಿಸಲಿದ್ದು, ಆ ಮೂಲಕ ಶಿಬಿರದ ಸಾರ್ಥಕತೆ ಸಾಕ್ಷೀಕರಿಸುವುದನ್ನು ಮೆಚ್ಚಿ ಅವರ ಮುಂದಿನ ಹಂತದ ತಯಾರಿಗೆ ಶ್ರಮಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಸೈಯದ್ ಮೊಹಮ್ಮದ್ ದಖನಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಶಾಂತೂ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಅನೀಲ ನಾಯ್ಕ, ರಾಮು ಮೊರಟಗಿ, ಜಿಲಾನಿ ನಾಟೀಕಾರ, ರಮೇಶ ನಡುವಿನಕೇರಿ ಮತ್ತಿತರರಿದ್ದರು.
ಇದಕ್ಕೂ ಮುನ್ನ ಸ್ಥಳೀಯ ಗುರುದೇವಾಶ್ರಮದಿಂದ ಶಿಬಿರಾರ್ಥಿ ಮಕ್ಕಳು ರಚಿಸಿದ ಮಾಸ್ಕ್(ಮಣ್ಣಿನ ಮುಖ ರೂಪಕಗಳ) ಹಿಡಿದು ಶಾಂತೇಶ್ವರ ಮಠದವರೆಗೂ ರಂಗ ಜಾಥಾ ನಡೆಸಲಾಯಿತು. ಬುದ್ಧ ಬೆಳದಿಂಗಳು, ಪರಿಸರ ಪ್ರಜ್ಞೆ ಮೂಡಿಸಿದ ಗುಬ್ಬಿ ಡ್ರಾಮಾ, ಹುಲಿ ಕುಣಿತ ಮಕ್ಕಳ ಪಾಲಕರ ಗಮನಸೆಳೆದವು.
ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌಧರಿ ಸ್ವಾಗತಿಸಿ, ನಿರೂಪಿಸಿದರು. ಮಹಾಂತೇಶ ನೂಲಾನವರ ವಂದಿಸಿದರು. ಈ ವೇಳೆ ನೀನಾಸಂ ನಿರ್ದೇಶಕ ಮೋಹನ ಶೇಣಿ, ಕಾಮಿಡಿ ಕಿಲಾಡಿಯ ಚಿದಂಬರ ಪೂಜಾರಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *