ಶಾಲೆ-ಕಾಲೇಜುಗಳಿಗೂ ತಟ್ಟಿದ ಬರದ ಬಿಸಿ !

ಹೀರಾನಾಯ್ಕ ಟಿ., ವಿಜಯಪುರ
ಕಡು ಬಿಸಿಲು ಜತೆಗೆ ನೀರಿನ ಅಭಾವದ ಬಿಸಿ ಜಿಲ್ಲೆಯ ವಿದ್ಯಾರ್ಥಿಗಳಿಗೂ ತಟ್ಟಿದ್ದು, ಈಗಾಗಲೇ ಪ್ರಾರಂಭಗೊಂಡಿರುವ ಕಾಲೇಜುಗಳ ಬೇಸಿಗೆ ರಜೆಯನ್ನು ವಿಸ್ತರಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿಗೆ ಡಿಡಿಪಿಯು ಮನವಿ ಮಾಡಿದ್ದಾರೆ.
2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿಯು ಕಾಲೇಜುಗಳನ್ನು ಮೇ 20ರಿಂದ ಪ್ರಾರಂಭಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿರುವ ಅತಿಯಾದ ತಾಪಮಾನ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬರದಿಂದಾಗಿ ಕಾಲೇಜುಗಳಲ್ಲಿ ಕುಡಿಯುವ ಹಾಗೂ ಬಳಕೆ ನೀರಿಗೂ ಸಮಸ್ಯೆ ಎದುರಾಗಿದೆ ಎಂದು ಪಿಯು ಕಾಲೇಜು ಉಪನ್ಯಾಸಕರ ಸಂಘ ಪಿಯು ಶಿಕ್ಷಣ ಇಲಾಖೆಗೆ ತಿಳಿಸಿದ ಹಿನ್ನೆಲೆ ಜೂ.1ರವರೆಗೆ ರಜೆ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಶಿಾರಸು ಮಾಡುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಡಿಡಿಪಿಯು ಎಸ್.ವೈ. ಅಮಾತೆ ಪತ್ರ ಬರೆದಿದ್ದಾರೆ.

ಸಾರಂಗಮಠದಲ್ಲಿ ನೀರಿನ ಅಭಾವ !
ತೋಟಗಾರಿಕೆ ಸಚಿವರ ತವರು ಕ್ಷೇತ್ರ ಸಿಂದಗಿ ತಾಲೂಕಿನ ಸಾರಂಗಮಠದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಶಿಕ್ಷಣ ಸಂಸ್ಥೆಗೆ ಬರದ ಬಿಸಿ ತಟ್ಟಿದೆ. ಸಂಸ್ಥೆಯಲ್ಲಿ 5500 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ನೀರಿನ ತೊಂದರೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳಿಗೆ 15 ದಿನ ರಜೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ತಾತ್ಕಾಲಿಕವಾಗಿ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳಲು ಸಂಸ್ಥೆ ಆಡಳಿತ ಮಂಡಳಿ ನಿರ್ಧರಿಸಿದೆ.

ಬಿಸಿಯೂಟಕ್ಕೂ ಬಂತು ಕುತ್ತು
ರಾಜ್ಯಾದ್ಯಂತ ಮೇ 28ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪ್ರಾರಂಭವಾಗಲಿವೆ. ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು, ಮಕ್ಕಳಿಗೆ ಕುಡಿಯಲು, ಶೌಚಗೃಹಕ್ಕೆ ನೀರು ಬೇಕು. ಬೇಸಿಗೆಯಿಂದಾಗಿ ನೀರಿಲ್ಲದೆ ಶಾಲೆಗಳಲ್ಲಿ ಸಮಸ್ಯೆ ಎದುರಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 113ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೈರುಣಗಿ, ನಿಂಬಾಳ ಬಿ.ಕೆ., ಅಗರಖೇಡ, ಅರ್ಜುಣಗಿ, ಚೋರಗಿ, ಅಂಜಗಿ, ಮಾವಿನಹಳ್ಳಿ, ಝಳಕಿ ಭಾಗದಲ್ಲಿ ಹೆಚ್ಚು ನೀರಿನ ಸಮಸ್ಯೆಯಿದ್ದು, ಜೀರಅಂಕಲಗಿ, ದೇವರನಿಂಬರಗಿ, ಬರಡೋಲ, ಗುಡಿಹಾಳ, ಹಾಲಳ್ಳಿ, ಕಂಚನಾಳ, ಘೋಣಸಗಿ, ಕಳ್ಳಕವಟಗಿ ತಾಂಡಾ-1, ಬರಟಗಿ ತಾಂಡಾ-1, ವಿಜಯಪುರದ ಮಡಸನಾಳ, ಗುಣಕಿ, ಸಿಂದಗಿ ತಾಲೂಕಿನ ಚಾಂದಕವಟೆ, ಜಲಪುರ, ಹಿರೂರ, ಅಸ್ಕಿ, ತುಂಬಗಿ, ಹೂವಿನಹಳ್ಳಿ, ರಾಂಪುರ ಪಿ.ಟಿ., ತಾಳಿಕೋಟೆ ತಾಲೂಕಿನ ಲಕ್ಕುಂಡಿ, ನಾವದಗಿ, ಗೋಟಖಂಡಕಿ, ಪೀರಾಪುರ, ಶೆಳ್ಳಗಿ, ಶಿವಪುರ, ನೀರಲಗಿ ಸುತ್ತಮುತ್ತ ಗ್ರಾಮಗಳಲ್ಲಿ, ನಾಗಠಾಣ ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೂ ನೀರಿನ ಸಮಸ್ಯೆ ಎದುರಾಗಿದೆ.

ವಿಜಯಪುರ ಜಿಲ್ಲೆಯ 113 ಗ್ರಾಮಗಳಲ್ಲಿ 547 ಟ್ಯಾಂಕರ್ ಮೂಲಕ ಪ್ರತಿ ದಿನ ಒಟ್ಟು 1,556 ಟ್ರಿಪ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಶಾಲೆ-ಕಾಲೇಜುಗಳಲ್ಲಿ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.
ಎಚ್. ಪ್ರಸನ್ನ ಹೆಚ್ಚುವರಿ ಜಿಲ್ಲಾಧಿಕಾರಿ

ಸಿಂದಗಿ ಸಾರಂಗಮಠದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಬಿಇಡಿ, ಡಿಇಡಿ, ಡಿಪಿಇಡಿ, ಮಹಿಳಾ ಪಿಯು ಕಾಲೇಜು, ಮಹಿಳಾ ಬಿಎಸ್‌ಡಬ್ಲುೃ, ಬಿಕಾಂ ಹಾಗೂ ಎರಡು ವಸತಿ ನಿಲಯಗಳಲ್ಲಿ 5500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಬಹಳ ಇರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 15 ದಿನ ರಜೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿಸಾರಂಗಮಠ, ಸಿಂದಗಿ


ಚಿತ್ರ: ಎಚ್‌ಎನ್ 27-1 (ಎ), (ಬಿ)

Leave a Reply

Your email address will not be published. Required fields are marked *