ಕ್ರೀಡೆಗೆ ಪ್ರೋತ್ಸಾಹ ಅವಶ್ಯ

ಸಿಂದಗಿ: ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದು ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್. ಸೋಮಾಪುರ ಹೇಳಿದರು.

ಇಲ್ಲಿನ ಸಿ.ಎಂ. ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮತ್ತು ರಾಣಿ ಚನ್ನಮ್ಮ ವಿವಿ ಆಶ್ರಯದಲ್ಲಿ ನಡೆದ ವಿಜಯಪುರ 3ನೇ ವಲಯಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಸೆಮಿಸ್ಟರ್ ಶೈಕ್ಷಣಿಕ ಪದ್ಧತಿಯಿಂದಾಗಿ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಕ್ರೀಡಾ ವಿಷಯ ಅಳವಡಿಸಬೇಕು ಎಂದು ಹೇಳಿದರು.

ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ಮಾತನಾಡಿ, ಯುವ ಜನತೆ ಸದೃಢ ಮನಸ್ಸು ಹಾಗೂ ಶರೀರ ಹೊಂದಲು ಕ್ರೀಡೆ ಅವಶ್ಯ ಎಂದರು.

ಜೆ.ಎಚ್. ಪಟೇಲ ಶಿಕ್ಷಣ ಕಾಲೇಜು ಪ್ರಾಚಾರ್ಯ ಡಾ. ಬಿ.ಎಂ. ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ರವಿ ಗೋಲಾ, ಶಾಂತೇಶ ದುರ್ಗಿ, ಸಂಗು ಬಿರಾದಾರ, ಮಂಜುನಾಥ ನಾಯ್ಕೋಡಿ, ವಿ.ಎಸ್. ಜಾಧವ, ವಿ.ಆರ್. ದಾಸರಡ್ಡಿ, ಎಂ.ಎಂ. ಕೆಂಭಾವಿ, ಪ್ರೊ. ಎಸ್.ಎ. ಜಾಹಗೀರದಾರ, ಪ್ರೊ. ಎಸ್.ಕೆ. ಹೂಗಾರ, ದೀಪಾ ಬನ್ನೆಟ್ಟಿ, ಪ್ರೊ. ಜಿ.ಜಿ. ಕಾಂಬಳೆ ಇತರರು ಇದ್ದರು.

ಸ್ಪರ್ಧೆಯಲ್ಲಿ ವಿಜೇತ ತಂಡಗಳು
ಕ್ರೀಡಾಕೂಟದಲ್ಲಿ ಒಟ್ಟು 12 ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ವಿಜಯಪುರದ ಸಹ್ಯಾದ್ರಿ ಕಾಲೇಜು ಪ್ರಥಮ, ತಾಳಿಕೋಟೆಯ ಖಾಸ್ಗತೇಶ್ವರ ಕಾಲೇಜು ದ್ವಿತೀಯ, ಮುದ್ದೇಬಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದವು. ವಿಜೇತ ತಂಡಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.