ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ಸಿಂದಗಿ: ಸಿಂದಗಿ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳಿಗೆ ತಾಲೂಕಿನ ಸಾಸಾಬಾಳ ಗ್ರಾಮದ ಬಳಿ ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ಎರಡು ಗಂಟೆಗೂ ಹೆಚ್ಚು ಕಾಲ ಬಸ್ ತಡೆದು ಪ್ರತಿಭಟಿಸಿದರು.

ವಿದ್ಯಾರ್ಥಿಗಳಾದ ಶರೀಫ್ ಕೊರಬು, ಶಿವು ಪೋಲೆಶಿ, ಸತೀಶ ಆಲಮೇಲ ಹಾಗೂ ಅಜಯ ರಾಠೋಡ ಮಾತನಾಡಿ, ತಾಲೂಕಿನ ಸಾಸಾಬಾಳ ಹಾಗೂ ತಾಂಡೆಯ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣಕ್ಕೆ ತೆರಳುತ್ತಿದಾರೆ. ಆದರೆ, ಶಹಾಪುರ ಮಾರ್ಗವಾಗಿ ಸಿಂದಗಿಗೆ ಬರುವ ಬಹುತೇಕ ಬಸ್‌ಗಳನ್ನು ನಿಲ್ಲಿಸದ ಕಾರಣ ಶಿಕ್ಷಣಕ್ಕೆ ಅಡಚಣೆಯಾಗುತ್ತಿದೆ ಎಂದು ಆರೋಪಿಸಿದರು.

ಬಸ್ ನಿಲ್ಲಿಸದ ಕಾರಣ ಶಾಲಾ ಕಾಲೇಜುಗಳಿಗೆ ನಿತ್ಯ ತಡವಾಗಿ ತೆರಳುವಂತಾಗಿದೆ. ಇದರಿಂದಾಗಿ ಪರೀಕ್ಷೆ ಎದುರಿಸಲು ತೊಂದರೆಯಾಗುತ್ತಿದೆ. ಈ ಕುರಿತು ಬಸ್ ಡಿಪೋ ವ್ಯವಸ್ಥಾಪಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಘಟಕ ವ್ಯವಸ್ಥಾಪಕರು ಆಗಮಿಸಬೇಕೆಂದು ಪಟ್ಟು ಹಿಡಿದ ಕಾರಣ ಘಟಕಾಧಿಕಾರಿ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಸ್ಥಳದಲ್ಲಿದ್ದ ಚಾಲಕ ಹಾಗೂ ನಿರ್ವಾಹಕರಿಗೆ ಬಸ್ ನಿಲುಗಡೆಗೆ ಸೂಚಿಸಿದರು. ಅಲ್ಲದೆ ನಾಳೆಯಿಂದಲೇ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ ಚಾಲಕರಿಗೂ ಬಸ್ ನಿಲ್ಲಿಸಲು ತಿಳಿಸಲಾಗುವುದು. ಜತೆಗೆ ಢವಳಾರ ಮುಖಾಂತರ ಹೋಗುವ ಬಸ್ ಮುಂದೆ ಖಾನಾಪುರದವರೆಗೂ ಹೋಗುವ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಇದೇ ಸಮಸ್ಯೆ ಮುಂದುವರಿದರೆ ಮತ್ತೆ ರಸ್ತೆ ತಡೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಿಂದಾಗಿ ಕೆಲಕಾಲ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಶ್ರೀಶೈಲ ಚಳ್ಳಗಿ, ಮಲ್ಲನಗೌಡ ಬಿರಾದಾರ, ಪರಶು ಚನ್ನೂರ, ನಾನಾಗೌಡ ಪಾಟೀಲ, ರಾಜು ಗಾಣೂರ, ಮಹಾಂತೇಶ ಕೆಳಗಿನಮನಿ, ಚಂದ್ರಕಾಂತ ಪೋಲೆಶಿ, ರವಿ ತಿಳಗೂಳ, ಇಸ್ಮಾಯಿಲ್ ಹಳಿಮನಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *