ಸಿಂದಗಿ: ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆದಿದ್ದು, ಪಟ್ಟಣದ 14ನೇ ವಾರ್ಡಿನ ಸದಸ್ಯ- ಹಾಲಿ ಶಾಸಕ ಅಶೋಕ ಮನಗೂಳಿ ಪತ್ನಿಯ ಸಹೋದರ ಹಾಗೂ ಸಚಿವ ಶಿವಾನಂದ ಪಾಟೀಲರ ಆಪ್ತ ಶಾಂತವೀರ ಬಿರಾದಾರ ಅಧ್ಯಕ್ಷರಾಗಿ, 18ನೇ ವಾರ್ಡಿನ ರಾಜಣ್ಣಿ ನಾರಾಯಣಕರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ತಹಸೀಲ್ದಾರ್ ಡಾ.ಪ್ರದೀಪ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಒಟ್ಟು 23 ಸದಸ್ಯರಲ್ಲಿ 18 ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದರು. ಸದಸ್ಯರಾದ ಶ್ರೀಶೈಲ ಬೀರಗೊಂಡ, ಭಾಗವ್ವ ಡೋಣೂರ, ಬಸಮ್ಮ ಸಜ್ಜನ ಹಾಗೂ ಅಧ್ಯಕ್ಷ ಸ್ಥಾನ ತಪ್ಪಿದರೆ, ಉಪಾಧ್ಯಕ್ಷನಾದರೂ ಆದೇನು ಎಂಬ ಶಾಸಕ ಮನಗೂಳಿ ಅವರ ಮಾತಿನ ವಿಶ್ವಾಸದ ಮೇಲೆ ಗಟ್ಟಿಯಾಗಿ ನಿಂತಿದ್ದ ಸದಸ್ಯ ಸಂದೀಪ ಚೌರ ಮತ್ತು 12ನೇ ವಾರ್ಡಿನ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಅವರು ಪುರಸಭೆ ಮುಖ್ಯಾಧಿಕಾರಿ ಅವರು ತಾವು ಕೇಳಿದ ವಾರ್ಡ್ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಹಿಷ್ಕರಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು. ಅದರಂತೆ ಈ ಚುನಾವಣೆಯಲ್ಲಿ ಪಾಲ್ಗೊಂಡಿರಲಿಲ್ಲ.
ಸಭೆಯಲ್ಲಿ ಶಾಂತವೀರ ಬಿರಾದಾರ ಅವರನ್ನು ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಸದಸ್ಯ ಭೀಮಾ ಕಲಾಲ ಸೂಚಿಸಿದರು. ಹಾಸಿಂಪೀರ ಆಳಂದ ಅನುಮೋದಿಸಿದರು. ಉಪಾಧ್ಯಕ್ಷ ರಾಜಣ್ಣಿ ಅವರಿಗೆ ಸದಸ್ಯ ಗೊಲ್ಲಾಳಪ್ಪ ಬಂಕಲಗಿ ಸೂಚಿಸಿದರು. ಬಾದಶಾಸಾಬ ತಾಂಬೋಳಿ ಅನುಮೋದಿಸಿದರು.
ಅಧ್ಯಕ್ಷನಾಗಬೇಕು ಎಂಬ ನನ್ನ ಕನಸು ಶಾಸಕರು ಹಾಗೂ ಹದಿನೆಂಟು ಸದಸ್ಯರ ಒಗ್ಗಟ್ಟಿನ ಬಲದಿಂದ ಈಡೇರಿದೆ. ಪಟ್ಟಣದ ಪ್ರತಿ ವಾರ್ಡಿನ ಅಭಿವೃದ್ಧಿ ನನ್ನ ಗುರಿಯಾಗಿದೆ. ಮುತುವರ್ಜಿಯಿಂದ ಪ್ರಾಮಾಣಿಕ ಕೆಲಸ ಮಾಡುವೆ.
ಶಾಂತವೀರ ಬಿರಾದಾರ, ಪುರಸಭೆಯ ನೂತನ ಅಧ್ಯಕ್ಷ
ದಿ.ಎಂ.ಸಿ.ಮನಗೂಳಿ ಅವರ ಆಶೀರ್ವಾದದಿಂದ ನಾನು ಉಪಾಧ್ಯಕ್ಷನಾಗಿರುವೆ. ಜೆಡಿಎಸ್ ಪಕ್ಷದ ಸದಸ್ಯನಾದರೂ ನನ್ನ ಆಯ್ಕೆಗೆ ಶಾಸಕರು, ಸದಸ್ಯರು ಬೆಂಬಲಿಸಿದ್ದಾರೆ. ಸದಸ್ಯ ಹಣಮಂತ ಸುಣಗಾರ ಅವರ ಪ್ರಯತ್ನ ಹಿರಿದಾಗಿದೆ. ಇಂದಿನಿಂದ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವೆ. ರಾಜಣ್ಣಿ ನಾರಾಯಣಕರ, ಪುರಸಭೆಯ ನೂತನ ಅಧ್ಯಕ್ಷ