ಮತದಾರರ ಪಟ್ಟಿ ಸರಿಪಡಿಸಲು ಆಗ್ರಹ

ಸಿಂದಗಿ: ಪುರಸಭೆ ಚುನಾವಣೆಗಾಗಿ ಸಜ್ಜುಗೊಂಡಿರುವ ಮತದಾರಪಟ್ಟಿ ದೋಷಪೂರಿತವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿ ಮುಂದೆ ಬಹಿರಂಗ ಸಭೆ ನಡೆಸಿ ಶಿರಸ್ತೆದಾರ ಎಸ್.ಎಸ್.ಬಾಬಾನಗರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಪುರಸಭೆ ಚುನಾವಣೆ ಮತದಾರರ ಪಟ್ಟಿ ಗೊಂದಲದಿಂದ ಕೂಡಿದೆ. ತಾಲೂಕಾಡಳಿತ ಹೊರಡಿಸಿದ ಸುತ್ತೋಲೆ ಪ್ರಕಾರ ಇರುವುದಿಲ್ಲ. ವಾರ್ಡಿನಲ್ಲಿ ವಾಸಿಸುವ ಮತದಾರರ ಹೆಸರಿನೊಂದಿಗೆ ಬೇರೆ ವಾರ್ಡಿನ ಹಾಗೂ ಪರಸ್ಥಳ ನಿವಾಸಿಗಳನ್ನು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕೂಡಲೇ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಜಿಪಂ ಸದಸ್ಯ ಬಿ.ಆರ್. ಯಂಟಮಾನ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ಬಸು ಸಜ್ಜನ, ಶಿವಾನಂದ ಆಲಮೇಲ, ಮಲ್ಲು ಪಡಶೆಟ್ಟಿ, ಶಿವಾನಂದ ಸೋಂಪುರ, ಪ್ರಕಾಶ ನಂದಿಕೋಲ ಮತ್ತಿತರಿರು ಇದ್ದರು.