ಪೌರ ಕಾರ್ಮಿಕರ ಪ್ರತಿಭಟನೆ

ಸಿಂದಗಿ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮೇಲೆ ಸ್ಥಳೀಯ ಜೆಡಿಎಸ್ ಮುಖಂಡ ಹಲ್ಲೆ ನಡೆಸಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಪುರಸಭೆಯಿಂದ ತಹಸೀಲ್ದಾರ್ ಕಚೇರಿವರೆಗೆ ಹಲಿಗೆ ಬಡಿಯುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಚನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ಮಾತನಾಡಿ, ಪಟ್ಟಣದ ಬಸವೇಶ್ವರ ಬ್ಯಾಂಕ್‌ನಲ್ಲಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ನನಗೆ ಫೋನ್ ಮಾಡಿ ಕರೆಯಿಸಿಕೊಂಡು ನಗರದ ನೀರಿನ ಸಮಸ್ಯೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಚರ್ಚಿಸುತ್ತಿದ್ದರು. ಆಗ ಸ್ಥಳಕ್ಕೆ ಬಂದ ಜೆಡಿಎಸ್ ಮುಖಂಡ ಸಲೀಮ್ ಜುಮನಾಳ, ವಾರ್ಡ್ ಜನರಿಗೆ ನೀರು ಒದಗಿಸುತ್ತಿಲ್ಲವೆಂದು ಏಕಾಏಕಿ ನನ್ನ ಕುತ್ತಿಗೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದರು.
ಸುದ್ದಿ ತಿಳಿದು ಪೌರ ನೌಕರರ ಯೂನಿಯನ್ ಪದಾಧಿಕಾರಿಗಳೊಂದಿಗೆ ಘಟನೆ ಕುರಿತು ಚರ್ಚಿಸಿ, ಪುರಸಭೆ ಆಡಳಿತಾಧಿಕಾರಿ ಎಸಿ, ಡಿಸಿ ಹಾಗೂ ಪಿಡಿ ಅವರಿಗೆ ಘಟನೆ ವಿವರ ನೀಡಿ, ಸೂಕ್ತ ಕ್ರಮಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದು, ಅವರ ನಿರ್ದೇಶನದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕಚೇರಿ ಕೆಲಸಕ್ಕೆ ತೊಂದರೆಯಾಗದಂತೆ ಸಾಂಕೇತಿಕವಾಗಿ ಕರ್ತವ್ಯ ಬಹಿಷ್ಕರಿಸಲಾಗಿದೆ ಎಂದರು.
ನಾನು ಹಲ್ಲೆ ಮಾಡಿಲ್ಲ
ಜೆಡಿಎಸ್ ಮುಖಂಡ ಸಲೀಮ್ ಜುಮನಾಳ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿ ಮೇಲೆ ನಾನು ಹಲ್ಲೆ ಮಾಡಿಲ್ಲ. ಘಟನಾ ಸ್ಥಳದಲ್ಲಿ, ಕಳೆದ ತಿಂಗಳಿನಿಂದಲೂ ವಾರ್ಡ್‌ನಲ್ಲಿ ನೀರು ಬಿಟ್ಟಿಲ್ಲ. ರಮಜಾನ್ ತಿಂಗಳಿರುವುದರಿಂದ ನಿವಾಸಿಗಳು ರಾತ್ರಿಯಿಡಿ ನೀರಿಗಾಗಿ ಅಲೆದಾಡುತ್ತಿದ್ದಾರೆ. ಮುಸ್ಲಿಂರು ಉಪವಾಸವಿರುವುದರಿಂದಾಗಿ ಮಾನವೀಯತೆಯಿಂದಾರೂ ನೀರು ಬಿಡಬೇಕಿತ್ತು. ನಾನು ನೀರು ಏಕೆ ಬಿಟ್ಟಿಲ್ಲ ಎಂದು ಕೇಳಿದರೆ, ನೀನು ಯಾರು ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಸಾಮಾನ್ಯ ವ್ಯಕ್ತಿ. ನನಗೆ ಕೇಳುವ ಹಕ್ಕಿಲ್ಲವೇ ಎಂದು ಪ್ರತಿವಾದಿಸಿದೆ. ನಂತರ ಅವರ ನನ್ನ ಮಧ್ಯ ಮಾತಿನ ವಾಗ್ವಾದ ನಡೆಯಿತು. ಅಷ್ಟರಲ್ಲಿಯೇ ನನ್ನೊಂದಿಗಿದ್ದ 21, 22 ಹಾಗೂ 23ನೇ ವಾರ್ಡ್‌ನ ಕೆಲ ನಿವಾಸಿಗಳು ನೂಕಲು ಶುರು ಮಾಡಿದ್ದರಿಂದ ನಾನು ಆಯಾತಪ್ಪಿ ಕೆಳಗೆ ಬೀಳುತ್ತಿದ್ದಾಗ ಅವರ ಕುತ್ತಿಗೆ ಹಿಡಿದಿದ್ದಕ್ಕೆ ನನ್ನ ಮೇಲೆ ಹಲ್ಲೆ ಆರೋಪ ಹೊರೆಸಿದ್ದಾರೆ ಎಂದು ತಿಳಿಸಿದರು.
ಮುಖ್ಯಾಧಿಕಾರಿ ಹೇಳಿಕೆ
ನನ್ನ ಹಾಗೂ ಜೆಡಿಎಸ್ ಮುಖಂಡರ ನಡುವೆ ನಡೆದ ಹಲ್ಲೆ ಘಟನೆ ಕುರಿತು ಸಚಿವ ಎಂ.ಸಿ. ಮನಗೂಳಿ ಅವರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದೆ. ಘಟನೆ ಬಗ್ಗೆ ಜೆಡಿಎಸ್ ಮುಖಂಡರು ಸಹ ಸಹಾನುಭೂತಿ ವ್ಯಕ್ತಪಡಿಸಿ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *