ಬೈಕ್ ಸವಾರರಿಬ್ಬರು ಸಾವು

ಸಿಂದಗಿ: ಪಟ್ಟಣದ ಕಲಕೇರಿ ಬೈಪಾಸ್ ಹತ್ತಿರ ಗುರುವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲೂಕಿನ ಕಲಕೇರಿ ಗ್ರಾಮದ ಅಮೀನಸಾಬ ಹುಸೇನಸಾಬ ಹೊನ್ನಳ್ಳಿ (45), ಅಕ್ಬರ್ ಮಲಿಕಸಾಬ ಮೂಲಿಮನಿ (20) ಮೃತರು.

ಕಲಬುರಗಿಯಿಂದ ವಿಜಯಪುರಕ್ಕೆ ಹೊರಟಿದ್ದ ಕಾರು ರಸ್ತೆ ದಾಟುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಸ್ಥಳದಲ್ಲೇ ಮೃತಪಟ್ಟರೆ ಕಾರಿನಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಕಾರು ಚಾಲಕ ಬೈಕ್​ಗೆ ಡಿಕ್ಕಿ ಹೊಡೆಸಿದ ರಭಸಕ್ಕೆ ಕಾರು ರಸ್ತೆ ಪಕ್ಕದ ಹೊಲದಲ್ಲಿ ಹೋಗಿ ನಿಂತಿದೆ. ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ನಿಂಗಪ್ಪ ಪೂಜಾರ ತನಿಖೆ ಕೈಗೊಂಡಿದ್ದಾರೆ.