More

    ಸರ್ಕಾರಗಳೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ

    ಸಿಂದಗಿ: ಸರ್ಕಾರಗಳೇ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಿ, ಖಾಸಗಿ ಶಾಲೆಗಳಿಗೆ ಬೆಂಬಲ ನೀಡುತ್ತಿರುವುದು ದುರದುಷ್ಟಕರ ಸಂಗತಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.
    ತಾಲೂಕಿನ ಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ಲೋಬಲ್ ಬಸವ ಪೀಸ್ ಆರ್ಗನೈಜೇಶನ್ ಉದ್ಘಾಟನೆ ಮತ್ತು ಉತ್ತರ ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಮತ್ತು ದತ್ತು ಪಡೆಯುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಮೂಲಭೂತ ಶಿಕ್ಷಣ ನಮ್ಮ ಮಕ್ಕಳ ಜನ್ಮಸಿದ್ದ ಹಕ್ಕು. ಖಾಸಗಿ ಶಾಲೆ ಶ್ರೇಷ್ಠವಲ್ಲ, ಸರ್ಕಾರಿ ಶಾಲೆ ಕೀಳಲ್ಲ. ನಮ್ಮ ಸರ್ಕಾರಗಳು ಸರ್ಕಾರಿ ಶಾಲೆಯಲ್ಲಿ ಕಲಿತವರಿಗೆ ಮೀಸಲಾತಿ ಮತ್ತು ನೌಕರಿ ಭದ್ರತೆ ಕೊಡುವ ಕಾನೂನು ಜಾರಿಯಾದಗಲೇ ಈ ಕೀಳರಿಮೆ ಕೊನೆಯಾಗುತ್ತದೆ ಎಂದರು.
    ಸ್ಥಳೀಯರಾದ ಅನಿವಾಸಿ ಭಾರತೀಯ, ಕತಾರ್ ದೇಶದ ಹಿರಿಯ ಇಂಜಿನಿಯರ್ ಶಶಿಧರ ಹೆಬ್ಬಾಳ, ದೂರದ ದೇಶದಲ್ಲಿದ್ದರೂ ಕನ್ನಡ ಮತ್ತು ಮಾತೃಭೂಮಿಯ ಸೇವೆ ಮಾಡುತ್ತಿರುವುದು, ಕರ್ನಾಟಕ ಸಂಘ, ಕನ್ನಡ ಶಾಲೆಗಳನ್ನು ತೆರೆದು, ಸಾಮಾಜಿಕ ಸೇವೆಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವುದಲ್ಲದೆ, ಅವರು ಕಲಿತ ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ದತ್ತು ಪಡೆದಿದ್ದು ಮತ್ತು ಶಾಂತಿಪ್ರಿಯ ಶರಣ ಬಸವಣ್ಣನವರ ಹೆಸರಲ್ಲಿ ಗ್ಲೋಬಲ್ ಬಸವ ಪೀಸ್ ಆರ್ಗನೈಜೇಶನ್ ಆರಂಭಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
    ಉತ್ತರ ಕರ್ನಾಟಕ ಬಳಗದ ಸಂಸ್ಥಾಪಕ ಶಶಿಧರ ಹೆಬ್ಬಾಳ ಮಾತನಾಡಿ, ಉತ್ತರ ಕರ್ನಾಟಕದ ವೈಶಿಷ್ಟೃ ವಿಶ್ವದಲ್ಲೆಡೆ ಪಸರಿಸಲಿ ಎನ್ನುವ ಮಹದಾಶೆ ನನ್ನಲ್ಲಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಗೊಂಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ನನ್ನ ಊರು, ನನ್ನ ಶಾಲೆ ಎಂಬ ಮಾದರಿ ಅಭಿಯಾನಕ್ಕೆ ಕೈ ಹಾಕುವ ಮೂಲಕ ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನ ಒಂದು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವೆ ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಚ್. ನಾಗನೂರ, ಕಲಕೇರಿ ಠಾಣಾಧಿಕಾರಿ ರೇಣುಕಾ ಹಳ್ಳಿ, ಲಕ್ಷ್ಮೀ ಜಾವಣೆ ಮತ್ತಿತರರು ಮಾತನಾಡಿದರು.
    ಶ್ರೀ ಮಠದ ಗುರುಲಿಂಗಯ್ಯ ಗದ್ದಗಿಮಠ ಸ್ವಾಮೀಜಿ, ಪರಮಣ್ಣ ಹೆಬ್ಬಾಳ, ರಾಚನಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಅಮೀನಸಾಬ ಹುಂಡೇಕಾರ, ಕತಾರ್ ಉತ್ತರ ಬಳಗದ ಮಹಿಳಾ ಮುಖಂಡೆ ಗೀತಾ ಹೆಬ್ಬಾಳ, ಇಂಗಳೇಶ್ವರದ ಜೆ.ವಿ. ಬಿರಾದಾರ, ಸಿಆರ್‌ಪಿ ರವಿಕುಮಾರ ರಾಠೋಡ ಮತ್ತಿತರರಿದ್ದರು. ಎಂ.ಬಿ. ಯಡ್ರಾಮಿ ಸ್ವಾಗತಿಸಿದರು. ಎನ್.ಆರ್. ಬಡಿಗೇರ ನಿರೂಪಿಸಿ, ವಂದಿಸಿದರು.

    ಕತಾರ್‌ನಲ್ಲಿ ಕನ್ನಡ ಕಟ್ಟಿ ಬೆಳೆಸಿದ ಹೆಬ್ಬಾಳ

    ತಾಲೂಕಿನ ಹೊನ್ನಳ್ಳಿ ಗ್ರಾಮದ ಅನಿವಾಸಿ ಭಾರತೀಯ ಶಶಿಧರ ಹೆಬ್ಬಾಳ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಕತಾರ್ ದೇಶದಲ್ಲಿ ಸರ್ಕಾರಿ ಹಿರಿಯ ಇಂಜಿನಿಯರ್ ಆಗಿದ್ದಾರೆ. ಕತಾರ್‌ನಲ್ಲಿ ಕನ್ನಡ ಭಾಷೆಯ ನೆಲೆ ಭದ್ರಗೊಳಿಸಿದ್ದಾರಲ್ಲದೆ, ಕನ್ನಡ ಶಾಲೆಗಳನ್ನು ಹುಟ್ಟುಹಾಕಿ ಕನ್ನಡದ ಕಂಪು ಬೀರುತ್ತಿದ್ದಾರೆ.
    ಸದಾ ಪ್ರಗತಿಪರ ಚಿಂತನೆಗಳ ಮೂಲಕ ಕತಾರ್‌ನಲ್ಲಿ ಕನ್ನಡದ ಅಭಿವೃದ್ಧಿಗಾಗಿ, ಕನ್ನಡ ಮನಸ್ಸುಗಳಿಗಾಗಿ ಅನೇಕ ಕಾರ್ಯಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕವಾಗಿ ಉತ್ತರ ಕರ್ನಾಟಕದ ಬಳಗ ಕಟ್ಟಿಕೊಂಡು, ಕನ್ನಡಿಗರಿಗೆ ಆಸರೆಯಾಗಿ ನಿಂತಿದ್ದಾರೆ. ಉದ್ಯೋಗ ಅರಸಿ ಕತಾರ್‌ಗೆ ತೆರಳುವವರ ಸಹಾಯಕ್ಕೆ ಸದಾ ಸಿದ್ಧರಾಗಿ ಅವರ ಸಮಸ್ಯೆಗಳನ್ನು ನೀಗಿಸುತ್ತಿದ್ದಾರೆ. ಅಲ್ಲದೆ, ದುಡಿಯಲು ಹೋದ ಅನಿವಾಸಿ ಭಾರತೀಯರ ಮಕ್ಕಳು ಸಹ ಕನ್ನಡ ಭಾಷೆಯ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಕನ್ನಡ ಹಂಬಲಕ್ಕೆ ಕತಾರ್ ದೇಶದಲ್ಲಿನ ಶಾಲೆಗಳಲ್ಲಿ ಕನ್ನಡವೂ ಒಂದು ಐಶ್ಚಿಕ ಭಾಷೆಯನ್ನಾಗಿಸಿರುವುದು ಇವರ ಶಿಕ್ಷಣ ಪ್ರಿಯತೆಗೆ ಸಾಕ್ಷಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts