ಭೀಕರ ರಸ್ತೆ ಅಪಘಾತಕ್ಕೆ 9 ಜನ ಬಲಿ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಸಮೀಪ ಶುಕ್ರವಾರ ನಸುಕಿನ ಜಾವ ವಿಜಯಪುರ- ಜೇವರ್ಗಿ ಹೆದ್ದಾರಿಯ ಬಂದಾಳ ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ (ಮಿನಿ ಲಾರಿ) ನಡುವೆ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಕ್ರೂಸರ್‌ನಲ್ಲಿದ್ದ 9 ಜನ ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, 6 ಜನರು ತೀವ್ರ ಗಾಯಗೊಂಡಿದ್ದು ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.

ಕ್ರೂಸರ್ ವಾಹನ ಚಾಲಕ ಅಲ್ಲೂರ ಬಿ. ಗ್ರಾಮದ ಶ್ರೀನಾಥ ಈಶ್ವರಪ್ಪ ನಾಲವಾರ (25), ಚಾಂದಪಾಶಾ ಮಶಾಕಸಾಬ ಮುಜಾವರ(24), ಗುರುರಾಜ ಸಾಬಣ್ಣ ಹಕೀಮ್ (35), ಅಜಿಂ ಅಬ್ದುಲ್‌ರಹಿಂ ಶೇಖ (35), ಶಾಖೀರ್ ಅಬ್ದುಲ್‌ರಹಿಂ ಶೇಖ (27), ಯುನುಸ್ ಸರ್ವರ್ ಪಟೇಲ ಕಡಬೂರ (25), ಮುನ್ಸೂಫ್ ಸರ್ವರ್‌ಪಟೇಲ ಕಡಬೂರ (28), ಅಂಬರೀಷ್ ಲಕ್ಷ್ಮಣ ದೊರೆ (30), ಸಾಗರ ಶಾಂತಪ್ಪ ದೊಡಮನಿ (22) ಮೃತಪಟ್ಟಿದ್ದು, ಇವರೆಲ್ಲರೂ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದ ಜಾಫರ್‌ಗಂಜ್ ಪ್ರದೇಶದವರು.

ಮಲ್ಲಿಕಾರ್ಜುನ ಜಮಾದಾರ, ಆಕಾಶ ಲಕ್ಷ್ಮಣ ದೊರೆ, ಮಹಮ್ಮದ್ ಸರ್ವರ್ ಪಟೇಲ ಕಡಬೂರ, ಸದ್ದಾಂ ಸಯ್ಯದ್ ಅಹ್ಮದ್ ಮುಂಬೈವಾಲಾ ಮತ್ತು ಆಂಧ್ರ ಮೂಲದ ಲಾರಿ ಚಾಲಕ ಆನಂದ ಸೋಪೇಟೆ, ಕ್ಲೀನರ್ ಎಸ್.ಎ.ಕೆ. ಜಾವೀದ್ ಗಾಯಾಳುಗಳು. ಇದರಲ್ಲಿ ಸದ್ದಾಂ ಮುಂಬೈವಾಲಾ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ಅಪಘಾತದ ತೀವ್ರತೆಗೆ ಕ್ರೂಸರ್ ಛಿದ್ರವಾಗಿದ್ದರೆ, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಮೃತರ ಮುಖಗಳು ಅಪ್ಪಚ್ಚಿಯಾಗಿ ಕೈಕಾಲುಗಳು ಕತ್ತರಿಸಿ ಬಿದ್ದಿವೆ. ಶವಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಣ್ಣದೋಕುಳಿ ಸಂಭ್ರಮದಲ್ಲಿದ್ದ ಜನತೆ ಹೆದ್ದಾರಿ ಮೇಲೆ ಹರಿದಿದ್ದ ರಕ್ತದ ಕೋಡಿ ನೋಡಿ ಮಮ್ಮಲ ಮರುಗಿದರು.

ಮೃತರೆಲ್ಲರೂ ಜಾಹೀರ್ ಜುನೇರ್ ಎಂಬುವವರ ಪರಸಿ ಪಾಲೀಶ್ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದಾರೆ. ಮಂಗಳವಾರ ಹೋಳಿ ಹುಣ್ಣಿಮೆ ಆಚರಣೆಗೆಂದು ಗೋವಾಕ್ಕೆ ತೆರಳಿ ಶುಕ್ರವಾರ ಮರಳಿ ಚಿತ್ತಾಪುರಕ್ಕೆ ಹೋಗುವಾಗ ತಿಕೋಟಾ ಕಡೆ ಒಣ ದ್ರಾಕ್ಷಿ ತರಲು ಹೊರಟಿದ್ದ ಆಂಧ್ರ ಮೂಲದ ಮಿನಿಲಾರಿ ನಡುವೆ ಈ ದುರ್ಘಟನೆ ನಡೆದಿದೆ. ಕ್ರೂಸರ್‌ನಲ್ಲಿದ್ದವರೆಲ್ಲರೂ ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ. ಚಾಲಕನ ನಿರ್ಲಕ್ಷೃವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಿಂದ ಮೂರು ಗಂಟೆಗೂ ಹೆಚ್ಚು ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಸವಾರರು ಪರದಾಡುವಂತಾಯಿತು. ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಪೊಲೀಸ್ ಅಧಿಕಾರಿ ನೇಮಿಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಎಂ.ಬಿ. ಸಂಕದ, ಸಿಪಿಐ ಎಂ.ಕೆ. ದಾಮಣ್ಣವರ, ಚಿತ್ತಾಪುರ ಸಿಪಿಐ ಜಿ. ಚಂದ್ರಶೇಖರ ಆಸ್ಪತ್ರೆಯಲ್ಲೇ ಬೀಡು ಬಿಟ್ಟು ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ತಾಲೂಕಿನ ಚಿಕ್ಕಸಿಂದಗಿ ಸಮೀಪ ಶುಕ್ರವಾರ ನಸುಕಿನ ಜಾವ ವಿಜಯಪುರ -ಜೇವರ್ಗಿ ಹೆದ್ದಾರಿಯ ಬಂದಾಳ ಕ್ರಾಸ್ ಬಳಿ ನಡೆದ ಅಫಘಾತದಲ್ಲಿ ಎರಡು ಕುಟುಂಬದ ತಮ್ಮಂದಿರಿಬ್ಬರು ಅಣ್ಣಂದಿರ ಜತೆಗೆ ಇಹಲೋಕ ತ್ಯಜಿಸಿದ್ದರೆ, ಮತ್ತೊಂದು ಕುಟುಂಬದ ತಮ್ಮನೊಬ್ಬ ಗಾಯಗೊಂಡು ಅಣ್ಣನನ್ನು ಕಳೆದುಕೊಂಡಿದ್ದಾನೆ.

ಕಡಬೂರ ಕುಟುಂಬದ ಮಹಮ್ಮದ್ ಗಾಯಗೊಂಡಿದ್ದರೆ, ತಮ್ಮಂದಿರಾದ ಯುನುಸ್ ಮತ್ತು ಶೇಖ ಕುಟುಂಬದ ಅಜೀಂ ಮತ್ತು ಶಾಕೀರ್ ಸಾವಿನಲ್ಲಿ ಒಂದಾದ ಸಹೋದರರು. ಅಲ್ಲದೆ, ತಮ್ಮ ಆಕಾಶ ದೊರೆ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರೆ, ಅಣ್ಣ ಅಂಬರೀಷ್ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಜಯಪುರ ಹೆದ್ದಾರಿ ಸಾವಿರ ರಹದಾರಿಯಾಗುತ್ತಿದ್ದು, ಚಿಕ್ಕಿಸಿಂದಗಿ ಸಮೀಪ ಗಾಣಗಾಪುರಕ್ಕೆ ಹೋಗಿ ಬರುತ್ತಿದ್ದ 18 ಜನ ಇದೇ ಸ್ಥಳದಲ್ಲಿ ಮೃತಪಟ್ಟ ದುರ್ಘಟನೆ ಮಾಸುವೆ ಮುನ್ನವೆ ಈಗ ಮತ್ತೊಂದು ದುರಂತ ನಡೆದಿದೆ.

ಕೂಡಲೇ ಘಟನಾ ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿದ ಸಿಪಿಐ ಎಂ.ಕೆ. ದಾಮಣ್ಣವರ ಶವಗಳನ್ನು ಆಸ್ಪತ್ರೆಗೆ ಸಾಗಿಸಿದರು. ನಂತರ ಲಾರಿ ಕೆಳಗಡೆ ಸಿಲುಕಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಲಾರಿ ಚಾಲಕ ಮತ್ತು ಕ್ರೂಸರ್ ವಾಹನದಲ್ಲಿದ್ದ ಗಾಯಾಳುಗಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮೆಚ್ಚುಗೆ ಪಡೆದರು.