ಆನೆಕಾಲು, ಡೆಂಘೆ, ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

ಸಿಂದಗಿ: ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮಾರಕ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಯಬೇಕೆಂದು ತಾಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಔಷಧ ನುಂಗಿಸುವ ಹಾಗೂ ಡೆಂೆ ಮತ್ತು ಚಿಕೂನ್‌ಗುನ್ಯಾ ನಿಯಂತ್ರಣ ಮತ್ತು ಸಕ್ರಿಯ ಕುಷ್ಟರೋಗ ಪತ್ತೆ ಹಚ್ಚುವ ಕಾರ್ಯಕ್ರಮದ ತಾಲೂಕುಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಫಲಗೊಳ್ಳಲು ತಾಲೂಕು ಮಟ್ಟದ ಸಮನ್ವಯ ಸಮಿತಿ ಸದಸ್ಯರು ಹಾಗೂ ಪಾಲುದಾರ ಸಿಬ್ಬಂದಿ ಸಾರ್ವಜನಿಕವಾಗಿ ವ್ಯಾಪಕ ಜಾಗೃತಿ ಮೂಲಕ ಹಿಮ್ಮೆಟ್ಟಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್. ಇಂಗಳೆ, ತಾಲೂಕಿನಲ್ಲಿ 4,18,628 ಜನರು ಮಾತ್ರೆ ನುಂಗಲು ಅರ್ಹರಿದ್ದು, 11,37,575 ಡಿಇಸಿ ಮಾತ್ರೆ ಹಾಗೂ 4,55,030 ಅಲ್ಬೆಂಡಾರೆಲ್ ಮಾತ್ರೆಗಳು ಲಭ್ಯವಿದ್ದು, 1820 ಮಾತ್ರೆ ನುಂಗಿಸುವ ಸಿಬ್ಬಂದಿ, 182 ಮೇಲ್ವಿಚಾರಕರಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ತಾಲೂಕಿನ ಶಿಕ್ಷಣ, ಶಿಶು ಅಭಿವೃದ್ಧಿ ಹಾಗೂ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸಿ ಆ.21ರಿಂದ ಆ.30ರ ವರೆಗೆ ನಡೆಯುವ ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದಡಿ ಸಾಮೂಹಿಕ ಡಿಇಸಿ ಮಾತ್ರೆ ನುಂಗಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಜೇಬುನ್ನಿಸಾ ಬೀಳಗಿ ಮಾತನಾಡಿ, ಡೆಂೆ ಮತ್ತು ಚಿಕೂನ್‌ಗುನ್ಯಾ ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಟ್ಟಣದಲ್ಲಿ ಪುರಸಭೆಯಿಂದ ರೋಗದ ಬಗ್ಗೆ ಪ್ರಚಾರ ಮಾಡಬೇಕು. ಅಲ್ಲಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಎಳ ನೀರು ಮಾರಾಟಗಾರರಿಗೆ ತೆಂಗಿನ ಚಿಪ್ಪುಗಳನ್ನು ಎಸೆಯದಂತೆ ಎಚ್ಚರಿಕೆ ನೀಡಬೇಕು. ಗ್ರಾಪಂ ಪಿಡಿಒ ಅಧಿಕಾರಿಗಳು ಗ್ರಾಮದ ಸ್ವಚ್ಛತೆಯ ಬಗ್ಗೆ ಗಮನ ಹರಿಸಲು ತಿಳಿಸಿ, ರೋಗ ನಿಯಂತ್ರಿಸಲು ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಸಹಕಾರ ಕೋರಿದರು.
ಹಿರಿಯ ಆರೋಗ್ಯ ಸಹಾಯಕ ಪಿ.ವೈ. ಚೌಡಕಿ ಮಾತನಾಡಿದರು. ಸಮಿತಿ ಸದಸ್ಯ ವಿ.ಎಸ್. ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಕಡಕಬಾವಿ ಕಾರ್ಯಕ್ರಮದ ಪ್ರಚಾರದ ಮೈಕಿಂಗ್ ಉದ್ಘಾಟಿಸಿದರಲ್ಲದೆ, ಬ್ಯಾನರ್, ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಬಾಲ ವಿಕಾಸ ಯೋಜನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಭಾಗವಹಿಸಿದ್ದರು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಎಸ್.ಎನ್. ಹಡಗಲಿ, ಡಾ. ಸರೋಜಿನಿ ದಾನಗೊಂಡ, ಜಹಾಂಗೀರ ಸಿಂದಗಿಕರ, ಪ್ರಭು ಜಂಗಿನಮಠ, ಎ.ಎಸ್. ಪಾಟೀಲ, ಬಿ.ಎಸ್.ಡಿಗ್ಗಿ, ಪಿ.ಎಸ್. ರೂಡಗಿ, ಶಿವಾನಂದ ಬಮ್ಮನಳ್ಳಿ ಇದ್ದರು.

Leave a Reply

Your email address will not be published. Required fields are marked *