ಉತ್ತಮ ಅಂಕ ಗಳಿಕೆಗೆ ಸಿಂಪಲ್ ಸೂತ್ರ

<< ಫೋನ್-ಇನ್ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಓದಿ >>

ಪರೀಕ್ಷೆಗಳೆಂದರೆ ಭಯ ಪಡುವ ಅಗತ್ಯವಿಲ್ಲ. ಇಲ್ಲಿಯವರೆಗೆ ಕಲಿತಿರುವ ಸಂಗತಿಗಳೇ ಅಲ್ಲಿರುತ್ತವೆ. ಆದರೂ ಅನೇಕ ಸಂದೇಹ-ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತವೆ. ಸರಳ ಹಾಗೂ ಸುಲಭ ಪರಿಹಾರಗಳನ್ನು ಸ-ಮುದ್ರ ಸಂಸ್ಥೆ ಸಂಸ್ಥಾಪಕಿ ಹಾಗೂ ಆಪ್ತ ಸಮಾಲೋಚಕಿ ಭಾರತಿ ಸಿಂಗ್ ವಿಜಯವಾಣಿ, ದಿಗ್ವಿಜಯ ಪೋನ್-ಇನ್​ನಲ್ಲಿ ವಿವರಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ವಿದ್ಯಾರ್ಥಿ ವೃಂದಕ್ಕೆ ಸಲಹೆ

ತರಗತಿಯಲ್ಲಿ ಶಿಕ್ಷಕರು, ಉಪನ್ಯಾಸಕರು ಪಾಠ ಮಾಡುವಾಗ ಚೆನ್ನಾಗಿ ಕೇಳಿಸಿಕೊಂಡಿದ್ದವರಿಗೆ ನೆನಪು ಜಾಸ್ತಿ ಇರುತ್ತದೆ. ಅವರು ಏನು ಹೇಳುತ್ತಿದ್ದಾರೆ? ಉದಾಹರಣೆ ಏನು ಕೊಡುತ್ತಾರೆ ಎಂಬುದನ್ನು ಗಮನಿಸಿಕೊಳ್ಳುತ್ತಲೇ ನೋಟ್ ಮಾಡಿಟ್ಟುಕೊಳ್ಳಬೇಕು. ಇದು ಮರುಮನನಕ್ಕೆ ಅನುಕೂಲಕರ. ಇದಕ್ಕೆ ‘ಆಕ್ಟೀವ್ ಲಿಸನಿಂಗ್’ ಎಂದು ಹೇಳುತ್ತಾರೆ. ಶಾಲೆಯಿಂದ ಮನೆಗೆ ಬಂದಾಗ ಏನು ಮಾಡಬೇಕು ಎಂಬ ಗೊಂದಲ ಬೇಡ. 3 ಗಂಟೆ ಸರಿಯಾಗಿ ಓದಿ. ತರಗತಿಗಳ ಬಳಿಕ 3 ತಾಸಿಗಿಂತ ಹೆಚ್ಚು ಓದಬಾರದು. ಇದಕ್ಕಿಂತ ಹೆಚ್ಚಿನ ವಿಷಯಗಳನ್ನು ಮಿದುಳು ಹಿಡಿದಿಟ್ಟುಕೊಳ್ಳುವುದಿಲ್ಲ ಎಂದು ತಜ್ಞರೂ ಹೇಳುತ್ತಾರೆ. ಹೀಗಾಗಿ ತರಗತಿಯಲ್ಲಿ ಕೇಳಿಸಿಕೊಂಡಿದ್ದನ್ನು ಮನೆಯಲ್ಲಿ ಓದಿ. ಹೀಗೆ ಓದಿದ್ದನ್ನು ನಂತರ ಬರೆಯಿರಿ. ಇದರಿಂದ ನಿಮ್ಮ ಎಲ್ಲ ಸಂವೇದನಾ ಅಂಗಗಳು ಸಕ್ರಿಯಗೊಳ್ಳುತ್ತವೆ. ಅಂದರೆ ನೀವು ನೋಡುತ್ತೀರಿ, ಓದುತ್ತೀರಿ, ಬರೆಯುತ್ತೀರಿ ಮತ್ತು ಕೇಳುತ್ತೀರಿ. ಇದು ನಿಮ್ಮ ನೆನಪನ್ನು ಹೆಚ್ಚಿಸುತ್ತದೆ. ಆದ್ದರಿಂದ ಅರ್ಥ ಆಗಲ್ಲ, ನೆನಪಿರುವುದಿಲ್ಲ ಎಂದು ಹೇಳುವವರಿಗೆ ‘ಓದಲು ಪ್ರಯತ್ನಿಸಬೇಕು’ ಎಂದು ಹೇಳುವುದಿಲ್ಲ, ಅಂಥವರಿಗೆ ‘ಓದಿ’ ಎಂದೇ ಹೇಳುತ್ತೇವೆ.

ಗಣಿತ ವಿಷಯ ನೆನಪಿಡಲು ತಂತ್ರ

ಗಣಿತವನ್ನು ನೆನಪಿಟ್ಟುಕೊಳ್ಳುವುದು ಹೇಗೆ?

ಎಷ್ಟು ಕಂಠಪಾಠ ಮಾಡಿದರೂ ನೆನಪಾಗಲ್ಲ; ಏನು ಮಾಡುವುದು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಒಂದು ಸೂತ್ರ ಇದೆ. “Read, Relate, Recall, Write, Remember’ – ಎಂಬುದೇ ಸರಳ ಫಾಮುಲಾ. ಅಂದರೆ ಓದಬೇಕು, ಓದಿದ್ದನ್ನು ಒಂದಕ್ಕೊಂದು ಜೋಡಿಸಿ ಸಂಬಂಧ ಕಲ್ಪಿಸಿಕೊಳ್ಳಬೇಕು. ನಂತರ ಮರುಮನನ ಮಾಡಬೇಕು. ಅದಾದ ನಂತರ ಬರೆಯಬೇಕು. ಆ ಬಳಿಕ ನೆನಪಿಸಿಕೊಳ್ಳಬೇಕು. ಈ ರೀತಿ ಅಭ್ಯಾಸ ಮಾಡಿದರೆ ಗಣಿತ ಸರಳ.”Practice makes you perfect, But perfect practice only makes you perfect’ ಎಂಬುದನ್ನೂ ಮರೆಯುವಂತಿಲ್ಲ. ವೆಬ್​ಸೈಟ್​ನಲ್ಲಿ ಇಲ್ಲವೆ, ಶಾಲೆಯಲ್ಲಿ ಸಿಗುವ ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯುತ್ತ ಅಭ್ಯಾಸ ಮಾಡಬೇಕು.

ಓದುವಾಗ ಹೀಗೆ ಮಾಡಬೇಡಿ

 • ಸ್ಮಾರ್ಟ್​ಫೋನ್ ಜತೆಗೆ ಇಟ್ಟುಕೊಳ್ಳುವುದು
 • ಟಿವಿ ಮುಂದೆ ಕುಳಿತುಕೊಳ್ಳುವುದು
 • ಮಂದ ಬೆಳಕಿನಲ್ಲಿ ಅಭ್ಯಸಿಸುವುದು
 • ಮಲಗಿಕೊಂಡು, ಅಡ್ಡಾದಿಡ್ಡಿ ಓಡಾಡುತ್ತ ಅಭ್ಯಾಸ ಮಾಡುವುದು
 • ಸಿನಿಮಾ, ಶಾಪಿಂಗ್, ಆಟಕ್ಕೆ ಎಂದು ಹೋಗುವುದು

ಹೀಗೆ ಮಾಡಿ..

 • ಒಂದೇ ಕಡೆ ಕುಳಿತುಕೊಳ್ಳಿ
 • ಸರಿಯಾಗಿ ಗಾಳಿ, ಬೆಳಕು ಇರುವಲ್ಲಿ ಕುಳಿತುಕೊಳ್ಳಿ
 • ಪರೀಕ್ಷೆ ಎದುರಿಸುತ್ತಿದ್ದೇವೆ ಎಂಬ ಭಾವದಿಂದ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ

ಪ್ರಮುಖ ಸೂತ್ರ ಸ್ಮರಣೆಗಿದು ದಾರಿ

 • ಮುಖ ಸೂತ್ರಗಳನ್ನು ಪೇಪರ್ ಕಾರ್ಡ್​ನಲ್ಲಿ ಬರೆಯಿರಿ
 • ಪೇಪರ್ ಕಾರ್ಡ್​ಗಳನ್ನು ನೀವು ಓದುವ ಸ್ಥಳದಲ್ಲಿ, ಮಲಗುವ ಸ್ಥಳದಲ್ಲಿ ತೂಗು ಹಾಕಿ
 • ಮಲಗುವ ಮುನ್ನ ಅದನ್ನೊಮ್ಮೆ ಓದಿ, ಬೆಳಗ್ಗೆ ಎದ್ದ ಕೂಡಲೇ ಮತ್ತೊಮ್ಮೆ ಓದಿ
 • ಅಲ್ಲಲ್ಲೇ ಅದನ್ನು ನೆನಪಿಸುವಂತೆ ಓದುತ್ತಿರಿ.

ಇದನ್ನು ಪರಿಶೀಲಿಸಿಕೊಳ್ಳಿ

ಊಟ, ನಿದ್ದೆ ಚೆನ್ನಾಗಿ ಆಗಿದೆಯೇ ಪರಿಶೀಲಿಸಿಕೊಳ್ಳಿ

ಎಂಟು ಗಂಟೆ ನಿದ್ರೆ ಪೂರ್ತಿ ಆಗಿದ್ದರೆ ಮಾತ್ರ ಮಿದುಳು ಸಕ್ರಿಯವಾಗಿರುತ್ತದೆ

ಮೊಬೈಲ್​ನಿಂದ ವಾಟ್ಸ್​ಆಪ್, ಫೇಸ್​ಬುಕ್ ಆಪ್ ಅನ್​ಇನ್​ಸ್ಟಾಲ್ ಮಾಡಿ

ಟಿವಿ ಕೇಬಲ್ ಕನೆಕ್ಷನ್ ತೆಗೆಸುವಂತೆ ಮನೆಯವರಿಗೆ ಹೇಳಿ

ವಿಜ್ಞಾನ ಅಧ್ಯಯನಕ್ಕೆ ಬೆಳಗ್ಗೆ 7-9 ಸಕಾಲ

ವಿಜ್ಞಾನವೆಂದರೆ ಕಷ್ಟ, ಓದಿದರೆ ಅರ್ಥವೂ ಆಗಲ್ಲ, ನೆನಪಿಗೂ ಬರಲ್ಲ ಎಂಬ ಬಾಗಲಕೋಟೆಯ ಅಂಜಲಿ ಸೇರಿ ರಾಜ್ಯದ ಹಲವು ವಿದ್ಯಾರ್ಥಿಗಳ ಪ್ರಶ್ನೆಗೆ ಭಾರತಿ ಅವರು ‘ಸಮಯ’ದ ಪಾಠ ಮಾಡಿದ್ದಾರೆ. ನಿದ್ದೆಗೆಟ್ಟು ಬೆಳ್ಳಂಬೆಳಗ್ಗೆ ಎದ್ದು ಕುಳಿತು ಓದಬೇಕಾಗಿಲ್ಲ. ಹೀಗೆ ಮಾಡಿದರೆ ಓದಿದ್ದು ಅರ್ಥವಾಗಲ್ಲ. ಬೇಗ ಎದ್ದು ನಿತ್ಯ ವಿಧಿಗಳನ್ನು ಪೂರೈಸಿ, ಸ್ವಚ್ಛ ಶರೀರ, ಮನಸ್ಸಿನೊಂದಿಗೆ ಬೆಳಗ್ಗೆ 7ರಿಂದ 9 ಗಂಟೆ ತನಕ ಓದಿದರೆ ಸಾಕು. ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಈ ಸಮಯದಲ್ಲಿ ಓದುವಾಗ ಹೈಲೈಟರ್ ಅಥವಾ ಕಲರ್ ಪೆನ್ಸಿಲ್ ಹಿಡಿದು ಅರ್ಥ ಆಗುವ ಹಾಗೂ ಅರ್ಥವಾಗದ ಅಂಶಗಳನ್ನು ಗುರುತಿಸಿ. ಒಮ್ಮೆಗೆ ಇಡೀ ಪಾಠವನ್ನು ಓದಿ ಮುಗಿಸಬೇಕಾಗಿಲ್ಲ. ಒಂದೊಂದೇ ಪ್ಯಾರಾ ಓದಿ. ಒಂದು ನಿಮಿಷದ ಪರೀಕ್ಷೆಯನ್ನು ನಿಮಗೆ ನೀವೇ ಮಾಡಿಕೊಂಡು ಮೌಲ್ಯಮಾಪನ ಮಾಡಿ. ಮೂರು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನೋಡಿ ಉತ್ತರ ಬರೆಯಿರಿ.

ಇವುಗಳನ್ನು ಪಾಲಿಸಿ..

 • ನೀವು ಓದಿದ್ದರಲ್ಲಿ ಅರ್ಥ ಆಗಿರುವುದನ್ನು ಮೇಲೆ ಬರೆಯಿರಿ. ಅರ್ಥ ಆಗದಿರುವುದನ್ನು ಕೆಳಗೆ ಬರೆಯಿರಿ.
 • ಹೀಗೆ ಅರ್ಥವಾಗದ್ದನ್ನು ಬರೆಯುವುದರಿಂದ ಆ ವಿಷಯವೂ ನೆನಪಿನಲ್ಲಿರುತ್ತದೆ
 • ನೋಡಿ ಇಲ್ಲವೆ, ಓದಿ ಕಲಿಯುವುದು ಸುಲಭವೇ  ಅಥವಾ ಬರೆದು ಕಲಿತುಕೊಳ್ಳುವುದು ಸುಲಭವೇ? ಎಂಬುದನ್ನು ನೀವೇ ಗುರುತಿಸಿಕೊಳ್ಳಿ.
 • ಒಂದೊಮ್ಮೆ ಚಿತ್ರಗಳನ್ನು ಬಿಡಿಸಿ ಕಲಿಯುವುದು ಇಷ್ಟ ಎಂದಾದರೆ, ಜೀವಶಾಸ್ತ್ರ (ಬಯಾಲಜಿ)ದಲ್ಲಿ ಬೇಕಾದಷ್ಟು ಚಿತ್ರಗಳಿವೆ. ಅವುಗಳನ್ನು ಬರೆದು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲಿ ಅಂಕಗಳಿಸಬಹುದು.

ಓದುವ ಮುನ್ನ..

 • ಮೊಸರನ್ನ, ದೋಸೆ ತಿನ್ನಬೇಡಿ
 • ಹುಳಿ ಮಜ್ಜಿಗೆ ಕುಡಿಯಿರಿ

ಓದುವುದು ಹೇಗೆ?

ಪ್ರಮುಖ ವಿಷಯಗಳನ್ನು ಅಥವಾ ಕೋರ್ ಸಬ್ಜೆಕ್ಟ್​ಗಳನ್ನು ಓದುವುದು ಹೇಗೆ? ಎಂಬ ಪ್ರಶ್ನೆಯನ್ನು ಕೊಪ್ಪಳದ ಸಹನಾ ಸೇರಿ ರಾಜ್ಯದ ಹಲವು ವಿದ್ಯಾರ್ಥಿಗಳು ಮುಂದಿಟ್ಟರು. ಇದಕ್ಕುತ್ತರಿಸಿದ ಭಾರತಿ ಸಿಂಗ್, ಪರೀಕ್ಷೆಗೆ ಇನ್ನು ಹೆಚ್ಚು ದಿನ ಇಲ್ಲ. ಹೀಗಾಗಿ ಇದಕ್ಕೊಂದು ಫಾಮುಲಾ ಇದೆ. 1:3:3. ಅರ್ಥಾತ್ ಇದರಲ್ಲಿ 1 ಎಂದರೆ ಪ್ರತಿ ದಿನ ನೀವು ಓದಿದ್ದನ್ನು ಒಂದು ಗಂಟೆ ಬರೆಯಬೇಕು. ಎರಡನೇ ಸ್ಥಾನದಲ್ಲಿರುವ 3 ಅಂದರೆ, ಪ್ರತಿ ದಿನ ಮೂರು ಗಂಟೆಗಳ ಕಾಲ ಮೂರು ವಿಷಯ ಓದಬೇಕು. ಅಂದರೆ ಒಂದೊಂದು ಗಂಟೆ ಒಂದೊಂದು ವಿಷಯವನ್ನು ಓದಬೇಕು. ಒಂದು ಗಂಟೆಗಿಂತ ಹೆಚ್ಚು ಓದಬಾರದು. ಹೀಗೆ ಓದಿರುವುದನ್ನು ಒಂದು ಗಂಟೆ ಬರೆಯಬೇಕು. ಕಾರಣ, ಪರೀಕ್ಷೆಗೆ ಮೀಸಲಾದ ನಿಗದಿತ ಅವಧಿಯಲ್ಲಿ ಬರೆಯೋದಕ್ಕೆ ಆಗದೇ ಕೆಲವರು ಪ್ರಶ್ನೆಗಳನ್ನು ಬಿಟ್ಟುಬಿಡುತ್ತಾರೆ. ಅದನ್ನು ತಪ್ಪಿಸುವುದಕ್ಕೆ ಈ ಬರವಣಿಗೆ ಸಹಕಾರಿ. ಇದರಿಂದ ಬರವಣಿಗೆ ವೇಗ ಅಭ್ಯಾಸವಾಗುತ್ತದೆ. ಇನ್ನು ಕೊನೆಯ 3ರ ಬಗ್ಗೆ ನೋಡೋಣ. ಮೂರು ವರ್ಷದ ಪ್ರಶ್ನೆಪತ್ರಿಕೆ ತೆಗೆದುಕೊಂಡು ಮೂರು ಸಲ ಅದನ್ನು ಪರೀಕ್ಷೆಯಂತೆಯೇ ಬರೆಯಿರಿ. ಈಗಾಗಲೇ ಪ್ರಿಪರೇಟರಿ ಎಕ್ಸಾಂ ಬರೆದಿದ್ದೀರಲ್ಲ. ಅದಕ್ಕೆ ಈ ಅಭ್ಯಾಸ ಪೂರಕ ವಾಗಿರುತ್ತದೆ. ಎಂಟು ಗಂಟೆ ಕಾಲ ನಿದ್ದೆ ಮಾಡಬೇಕು. ಪರೀಕ್ಷೆ ಹತ್ತಿರ ಬಂದಾಗ ಒಂದು ಗಂಟೆ ಕಡಿಮೆ ಮಾಡಿ, ಏಳು ಗಂಟೆಯಷ್ಟೇ ನಿದ್ದೆ ಮಾಡಿ ಸಾಕು. ಓದಿಗೆ ಕೂರುವ ಮುನ್ನ ಮೊಸರನ್ನ, ದೋಸೆ ತಿನ್ನಬಾರದು. ತಿಂದರೆ ಜಡ ಆವರಿಸು ತ್ತದೆ. ಅದರ ಬದಲು ಹುಳಿ ಮಜ್ಜಿಗೆ ಕುಡಿದರೆ ಉತ್ತಮ.

ಬೇಸಿಗೆ ಹತ್ತಿರ ಇರುವ ಕಾರಣ ಹುಳಿಮಜ್ಜಿಗೆ ಕುಡಿದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಬುದ್ಧಿ ಚುರುಕಾಗಿರುತ್ತದೆ.

ಭಯ ಓಡಿಸಲು ಹೀಗೆ ಮಾಡಿ

 • ಭಯ ಆದಾಗ ಒಂದು ಗ್ಲಾಸ್ ತಣ್ಣಗಿನ ನೀರು ಕುಡಿಯಿರಿ
 • ನಿತ್ಯ ಬೆಳಗ್ಗೆ ಎದ್ದು ಯೋಗ, ಪ್ರಾಣಾಯಾಮ ಮಾಡಿ
 • ನಿತ್ಯ ಬೆಳಗ್ಗೆ ಅರ್ಧ ಗಂಟೆ ಬಿರುಸಾದ ನಡಿಗೆ ಮಾಡಿ
 • ಸ್ನಾನ, ದೇವರಿಗೆ ನಮಸ್ಕಾರ ಮಾಡಿ ತಿಂಡಿ ತಿನ್ನಿ

ಆರ್ಟ್ಸ್ ವಿಷಯ ಓದಲೇಬೇಕು

ಕಲಾ ವಿಭಾಗದ ವಿದ್ಯಾರ್ಥಿಗಳು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಓದುವಾಗ ವಿಷಯ ಅರ್ಥೈಸಿಕೊಳ್ಳಬೇಕು. ಹೆಸರು ನೆನಪಿಟ್ಟುಕೊಳ್ಳ ಬೇಕು. ಇದಕ್ಕೊಂದು ಟೆಕ್ನಿಕ್ ಇದೆ. ನಾವೀಗ ವಿಜಯವಾಣಿ ಫೋನ್- ಇನ್​ನಲ್ಲಿ ಇದ್ದೇವೆ. “NEWS’ ಎಂಬುದನ್ನೇ ಗಮನಿಸಿ- “North East West South’ ಮೂಲಗಳಿಂದ ಸುದ್ದಿ ಹರಿವು ಇದ್ದ ಕಾರಣ ಸಂಕ್ಷಿಪ್ತವಾಗಿ “NEWS’ ಎಂದು ಮಾಡಿಕೊಂಡರು. ಇದೇ ಮಾದರಿಯಲ್ಲಿ ನಾವು ಕೂಡ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಸಂಕ್ಷಿಪ್ತ ರೂಪಗಳನ್ನು ಮಾಡಿಕೊಳ್ಳಬಹುದು. ಒಂದೇ ಸಲ ಓದಿದ್ದರಲ್ಲಿ 100 ಅಂಕ ಬರಬೇಕೆಂದರೆ ಆಗಲ್ಲ. ಸಮಯ ಕೊಟ್ಟು, ಆರಂಭದಿಂದಲೇ ಓದುವುದನ್ನು ರೂಢಿಮಾಡಿಕೊಳ್ಳಿ. ಡೆಫಿನಿಷನ್ ಮೂಲಕವೇ ಕಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬಹುದು. ಪ್ರಶ್ನೆಗೆ ಬೇಕಿದ್ದಷ್ಟೇ ಉತ್ತರ ಬರೆಯಿರಿ. ಪುಟಗಟ್ಟಲೇ ಬರೆಯಬೇಡಿ. ಬುಲೆಟ್ ಪಾಯಿಂಟ್​ಗಳಲ್ಲಿ ಉತ್ತರ ಬರೆದರೂ ಅಂಕ ಸಿಕ್ಕೇ ಸಿಗುತ್ತದೆ.

One Reply to “ಉತ್ತಮ ಅಂಕ ಗಳಿಕೆಗೆ ಸಿಂಪಲ್ ಸೂತ್ರ”

 1. Thank you Vijayavani 🙂 Best wishes to all SSLC and PUC students..please fear is just an illusion ! Face exams bravely, joyfully 🙂

Comments are closed.