ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

ಅಲಿಘಡ್​: ಇಲ್ಲಿನ ಒಂದು ಕಚೋರಿ ತಯಾರಿಸುವ ಸಣ್ಣ ಅಂಗಡಿಯ ಆದಾಯ ನೋಡಿದ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ.

ಇದೊಂದು ಚಿಕ್ಕ ಅಂಗಡಿಯಾಗಿದ್ದು ಮುಕೇಶ್​ ಕಚೋರಿ ಎಂಬುದು ಹೆಸರು. ಅಲಿಘಡ್​ನ ಸೀಮಾ ಸಿನಿಮಾ ಹಾಲ್​ ಸಮೀಪ ಇರುವ ಈ ಕಚೋರಿ ಅಂಗಡಿ ಸ್ಥಳೀಯರಿಗಂತೂ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಇದರ ಮಾಲೀಕ ಮುಕೇಶ್​ ಅವರು ಪ್ರತಿದಿನ ಬೆಳಗ್ಗೆಯಿಂದ ಕಚೋರಿ ಹಾಗೂ ಸಮೋಸಾವನ್ನು ಮಾರಲು ಪ್ರಾರಂಭಿಸಿದರೆ ಇಡೀ ದಿನ ಅಂದರೆ ಸಂಜೆಯವರೆಗೂ ಅವರ ಅಂಗಡಿಯ ಬಳಿ ಜನ ಸಾಲು ಕಡಿಮೆಯಾಗುವುದಿಲ್ಲ. ಅಲ್ಲೊಂದು ಕ್ಯೂ ಇದ್ದೇ ಇರುತ್ತದೆ.

ಮುಕೇಶ್​ ಅವರ ಕಚೋರಿ ವ್ಯಾಪಾರ ತುಂಬ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಈ ಅಂಗಡಿಯ ವಿರುದ್ಧ ಯಾರೋ ವಾಣಿಜ್ಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ದೂರುದಾರರು ನೀಡಿದ್ದ ವರದಿಯನ್ನು ಪರಿಶೀಲನೆ ಮಾಡುವ ದೃಷ್ಟಿಯಿಂದ ತೆರಿಗೆ ಇಲಾಖೆ ಅಧಿಕಾರಿಗಳ ತಂಡವೊಂದು ಮಾರುವೇಷದಲ್ಲಿ ಆಗಮಿಸಿದ್ದಲ್ಲದೆ ಮುಕೇಶ್​ ಅವರ ಅಂಗಡಿಯ ಸಮೀಪವೇ ಮತ್ತೊಂದು ಅಂಗಡಿಯನ್ನು ತೆರೆಯಿತು. ಹಾಗೇ ಮುಕೇಶ್​ ಅವರ ವ್ಯಾಪಾರದ ಟ್ರಿಕ್​​ನ್ನು, ಅವರ ಜಾಡನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿತು. ಹಾಗೇ ಅಂಗಡಿ ತೆರೆದಿದ್ದ ಅಧಿಕಾರಿಗಳಿಗೆ ತಿಳಿದ ಸತ್ಯವೇನೆಂದರೆ, ಮುಕೇಶ್​ ಅವರು ಏನಿಲ್ಲವೆಂದರೂ ವಾರ್ಷಿಕವಾಗಿ ಸುಮಾರು 60 ಲಕ್ಷ ರೂಪಾಯಿಯಿಂದ 1 ಕೋಟಿಯವರೆಗೆ ಗಳಿಸುತ್ತಾರೆ ಎಂಬುದು. ಇದನ್ನು ನೋಡಿದವರು ಅವರೇ ತಬ್ಬಿಬ್ಬಾದರು.

ಆದರೆ ಮುಕೇಶ್​ ಇದುವರೆಗೂ ತಮ್ಮ ಅಂಗಡಿಯನ್ನು ಜಿಎಸ್​ಟಿಯಡಿ ದಾಖಲಿಸಿಕೊಂಡಿಲ್ಲ. ಹಾಗೇ ತೆರಿಗೆಯನ್ನೂ ಕಟ್ಟಿಲ್ಲ. ಇದೇ ಕಾರಣಕ್ಕೆ ತೆರಿಗೆ ಇಲಾಖೆ ಅಧಿಕಾರಿಗಳು ಮುಕೇಶ್​ಗೆ ನೋಟಿಸ್​ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಕೇಶ್​, ನನಗೆ ಆದಾಯ ತೆರಿಗೆ, ಜಿಎಸ್​ಟಿ ಬಗ್ಗೆ ತಿಳಿವಳಿಕೆ ಇಲ್ಲ. ಕಳೆದ 12 ವರ್ಷಗಳಿಂದ ಸಮೋಸಾ, ಕಚೋರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇನೆ. ನಾವು ಸಾಮಾನ್ಯ ಜನರು ಎಂದು ಹೇಳಿದ್ದಾರೆ.

ಪ್ರಕರಣವನ್ನು ತನಿಖೆ ಮಾಡುತ್ತಿರುವ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಯೋರ್ವ ಈ ಬಗ್ಗೆ ಹೇಳಿಕೆ ನೀಡಿದ್ದು, ಮುಕೇಶ್​ ತಮ್ಮ ಆದಾಯವನ್ನು ಮರೆಮಾಚಿಲ್ಲ. ನಮ್ಮೆದುರು ಒಪ್ಪಿಕೊಂಡಿದ್ದಾರೆ. ಹಾಗೇ ಕಚೋರಿ, ಸಮೋಸಾ ತಯಾರಿಕೆಗಾಗಿ ಬೇಕಾಗಿರುವ ವಸ್ತುಗಳು, ಎಣ್ಣೆ, ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬುದನ್ನೂ ನಮಗೆ ದಾಖಲೆ ಸಮೇತ ತಿಳಿಸಿದ್ದಾರೆ ಎಂದಿದ್ದಾರೆ.

ಹಾಗೇ ಅವರು ಅಂಗಡಿಯನ್ನು ಜಿಎಸ್​ಟಿಯಡಿ ರಿಜಿಸ್ಟ್ರಾರ್​ ಮಾಡಿಸಿಕೊಳ್ಳುವುದು ಕಡ್ಡಾಯ. ತೆರಿಗೆಯನ್ನೂ ಕಟ್ಟಬೇಕು ಎಂದು ರಾಜ್ಯ ಗುಪ್ತಚರ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *