ನಾಳೆಯಿಂದ ಅಯ್ಯಪ್ಪಸ್ವಾಮಿ ದೇಗುಲದ ರಜತ ಮಹೋತ್ಸವ

ವಿಜಯವಾಣಿ ಸುದ್ದಿಜಾಲ ಹುಣಸೂರು
ಪಟ್ಟಣದ ಕಲ್ಕುಣಿಕೆ ಬಡಾವಣೆ ಬಳಿಯ ಬೆಟ್ಟದಲ್ಲಿ ಆಸ್ತಿಕರ ಶ್ರದ್ಧಾಕೇಂದ್ರವಾಗಿರುವ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ರಜತ ಮಹೋತ್ಸವವನ್ನು ಮೇ 23, 24ರಂದು ಆಯೋಜಿಸಲಾಗಿದೆ.
ಪ್ರತಿವರ್ಷವೂ ಮೇ ತಿಂಗಳಲ್ಲಿ ದೇವಾಲಯದ ವಾರ್ಷಿಕೋತ್ಸವ ನಡೆಸುತ್ತಿದ್ದು ಈ ಬಾರಿ ಸುಬ್ಬರಾಯ ತಂತ್ರಿಗಳ ಸುಪುತ್ರ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಮಹೋತ್ಸವ ನೆರವೇರಲಿದೆ ಎಂದು ದೇವಾಲಯ ಸೇವಾ ಸಮಿತಿ ತಿಳಿಸಿದೆ.

ಕಾರ್ಯಕ್ರಮ: ಮೇ 23ರ ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ಬಿಂಬಶುದ್ಧಿ ನಡೆಯಲಿದೆ. ಸಂಜೆ 5 ಗಂಟೆಯಿಂದ ಪ್ರಾಯಶ್ಚಿತ್ತ ಹೋಮ, ಕಲಶಾಧಿವಾಸ ನಡೆಯಲಿದೆ. 24 ರಂದು ಬೆಳಗ್ಗೆ 7 ಗಂಟೆಗೆ ದುರ್ಗಾಹೋಮ, ಮಹಾಕುಂಭಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಹನುಮ ಮತ್ತು ಮುತ್ತಪ್ಪ ಸ್ವಾಮಿ: ಬೆಟ್ಟದ ತಪ್ಪಲಿನಲ್ಲಿ ಶ್ರೀಆಂಜನೇಯಸ್ವಾಮಿ ಮೂರ್ತಿ ರಾರಾಜಿಸುತ್ತಿದ್ದು, ಆಂಜನೇಯ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾನೆ. ಎರಡು ವರ್ಷಗಳ ಹಿಂದೆ ಕೇರಳದ ದೇಗುಲಗಳ ಶೈಲಿಯಲ್ಲಿ ಪಕ್ಕದಲ್ಲೇ ಮುತ್ತಪ್ಪಸ್ವಾಮಿಯ ದೇಗುಲವನ್ನು ನಿರ್ಮಿಸಿದ್ದು, ಕೇರಳ ಮೂಲಕ ಭಕ್ತರು ಇಲ್ಲಿಗೆ ನಿತ್ಯವೂ ಬಂದು ಪೂಜಾ ಕೈಂಕರ್ಯ ಕೈಗೊಳ್ಳುತ್ತಿದ್ದಾರೆ. ಬೆಟ್ಟದ ತುದಿಯನ್ನು ತಲುಪಲು ಸೇವಾ ಸಮಿತಿ ಸುಸಜ್ಜಿತ ಮೆಟ್ಟಿಲುಗಳನ್ನು ನಿರ್ಮಿಸಿದೆ.

ದೇಗುಲ ನಿರ್ಮಾಣ: ಬಡಾವಣೆಯ ಸರ್ವೇ ನಂ.149ರಲ್ಲಿ 4 ಎಕರೆ ಭೂಪ್ರದೇಶದ ಬೆಟ್ಟದ ತುದಿಯಲ್ಲಿ ಅಯ್ಯಪ್ಪಸ್ವಾಮಿ ವಿರಾಜಮಾನನಾಗಿದ್ದು, 1994ರಲ್ಲಿ ಅಯ್ಯಪ್ಪ ಭಕ್ತರು ಕೇರಳದ ನಾರಾಯಣ ಪೋದುದಾಸ್ ಅವರಿಂದ ಆಯ ಪೂಜೆ ನಡೆಸಿ, ಮಧುರೆ ಜಿಲ್ಲೆಯ ಅನ್ನಂಪಾಡಿ ಗ್ರಾಮದ ಸಪ್ತಪತಿಯಾರ್ ಎಂಬುವರು ದೇಗುಲದ ಕೆತ್ತನೆ ಕಾರ್ಯಗಳನ್ನು ನಡೆಸಿದರು. ದೇವಾಲಯದ ಮುಖ್ಯಪ್ರಾಣ ಶ್ರೀಅಯ್ಯಪ್ಪಸ್ವಾಮಿ ಮೂರ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಹಕಾರ, ಮಾರ್ಗದರ್ಶನದಡಿ ಕಾರ್ಕಳದ ಶ್ಯಾಮರಾಯಾಚಾರ್ ನಿರ್ಮಿಸಿಕೊಟ್ಟಿದ್ದಾರೆ. ಕೇರಳದ ಶಿಬಲೂರಿನ ಸುಬ್ಬರಾಯ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದ ಪ್ರತಿಷ್ಠಾಪನಾ ಕಾರ್ಯ ನಡೆಸಲಾಯಿತು.

Leave a Reply

Your email address will not be published. Required fields are marked *