ಕೋಲಾರ: ಚಳಿಗಾಲದಲ್ಲಿ ತೇವಾಂಶ ಹೆಚ್ಚಾಗುತ್ತಿರುವುದರಿಂದ ರೇಷ್ಮೆ ಬೆಳೆಗೆ ಸುಣ್ಣಕಟ್ಟು ರೋಗ ಉಲ್ಬಣ ಸಾಧ್ಯತೆ ಇದ್ದು, ತಡೆಗಟ್ಟಲು ಪ್ರಾರಂಭದಲ್ಲೇ ಮುಂಜಾಗ್ರತೆ ವಹಿಸಿ, ಅಗತ್ಯ ಔಷಧೋಪಚಾರ ಮಾಡುವಂತೆ ರೈತರಿಗೆ ರೇಷ್ಮೆ ಉಪನಿರ್ದೇಶಕ ಎಸ್.ಎನ್.ಶ್ರೀನಿವಾಸ್ ಸಲಹೆ ನೀಡಿದ್ದಾರೆ.
ಪ್ರಾರಂಭದಲ್ಲಿ ಚಾಕಿ ಹುಳುಗಳು ಆಸ್ಪರ್ಜಿಲ್ಲೋಸಿಸ್ ರೋಗಕ್ಕೆ ತುತ್ತಾಗುತ್ತವೆ. ಬುವೇರಿಯಾ ಬ್ಯಾಸಿಯಾನ ಎಂಬ ಶಿಲೀಂಧ್ರ ಬಿಳಿ ಸುಣ್ಣಕಟ್ಟು ರೋಗಕ್ಕೆ ಕಾರಣವಾಗಿದ್ದು, ಇದರಿಂದ ಆಸ್ಪರ್ಜಿಲ್ಲೋಸಿಸ್ ರೋಗ ಬರಲು ಕಾರಣವಾಗಿದೆ. ಆಸ್ಪರ್ಜಿಲ್ಲೋಸಿಸ್ ರೋಗಕ್ಕೆ ಕಡಿಮೆ ಉಷ್ಣಾಂಶ ಮತ್ತು ಅಧಿಕ ತೇವಾಂಶವೇ ಸೋಂಕಿನ ಮೂಲ. ಗಡುಸಾದ ಮತ್ತು ರೋಗಪೀಡಿತ ಹುಳು, ವಾತಾವರಣ, ಮನೆ ಸಲಕರಣೆಗಳು ಮತ್ತು ಪರ್ಯಾಯ ಕೀಟಗಳೂ ಸೋಂಕಿಗೆ ಕಾರಣ.
ಉಷ್ಣಾಂಶ ಹೆಚ್ಚಿಸಿ
ಇದ್ದಿಲು, ಕೆಂಡ ಅಥವಾ ಹೀಟರ್ ಉಪಯೋಗಿಸಿ ರೇಷ್ಮೆ ಹುಳು ಸಾಕುವ ಮನೆಗಳಲ್ಲಿ ಉಷ್ಣಾಂಶ ಹೆಚ್ಚಿಸಬೇಕು. ಹುಳುವಿನ ಹಂತದಲ್ಲಿ ಹೆಚ್ಚಾಗಿ ಸುಣ್ಣವನ್ನು ಎರಡು ದಿನಕ್ಕೆ ಒಂದು ಬಾರಿ ಮತ್ತು ಬೆಳಗ್ಗೆ ಸೊಪು$್ಪಕೊಡುವ ಮುನ್ನ ಧೂಳೀಕರಿಸಿ ಸೊಪ್ಪು ಕೊಡುವುದು ಉತ್ತಮ. ಇನ್ನು ರೇಷ್ಮೆ ಹುಳು ಸಾಕುವ ಸ್ಥಳದಲ್ಲಿ ನೆಲಕ್ಕೆ ಸುಣ್ಣವನ್ನು ಹರಡಬೇಕು. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸೊಪು$್ಪ ನೀಡಬೇಕು.
ಗುಣಮಟ್ಟ ಖಾತ್ರಿ ಪಡಿಸಿಕೊಳ್ಳಿ
ಸುಣ್ಣಕಟ್ಟು ರೋಗ ನಿವಾರಣೆಗೆ ಬಳಸುವ ಔಷಧಗಳನ್ನು ಬಳಸುವ ಮುನ್ನ ಅವಧಿ ಮತ್ತು ಶಿಪಾರಸ್ಸು, ಪ್ರಮಾಣ ಹಾಗೂ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಬೇಕು. ರೋಗದ ಲಕ್ಷಣ ಕಂಡ ಕೂಡಲೇ ಕ್ರಮಕೈಗೊಳ್ಳಬೇಕು. ಸಾಕಣೆ ಅವಧಿಯಲ್ಲಿ ಶುಚಿತ್ವ ಕಾಪಾಡಬೇಕು. ರೋಗಪೀಡಿತ ಹುಳುಗಳನ್ನು ನಾಶಪಡಿಸಬೇಕು. ಹೊಸ ಹುಳು ತರುವ ಮುನ್ನ ಸೋಂಕು ನಿವಾರಣೆ ಕಡ್ಡಾಯ. ರೋಗ ಕಂಡು ಬಂದಿದ್ದಲ್ಲಿ ಹೆಚ್ಚುವರಿಯಾಗಿ ಒಮ್ಮೆ ಬೆಳೆ ಆದ ನಂತರ ಸುಣ್ಣದ ತಿಳಿಯಿಂದ ಸೋಂಕು ನಿವಾರಣೆ ಉತ್ತಮ. ಹೆಚ್ಚು ಚಳಿ ಇದೆ ಎಂದು ಅನೇಕರು ಕಿಟಕಿ ಮುಚ್ಚುತ್ತಾರೆ. ಅದು ತಪು$್ಪ. ಇದರಿಂದ ಇನ್ನಷ್ಟು ಶೀತ ಹೆಚ್ಚಾಗಿ ರೋಗ ಉಲ್ಬಣವಾಗುತ್ತದೆ.
ಮಾಹಿತಿಗೆ ಸಂಪರ್ಕಿಸಿ
ರೋಗಗಳ ನಿಯಂತ್ರಣಕ್ಕಾಗಿ ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಮುಂಜಾಗ್ರತೆ ವಹಿಸಿ ರೋಗವನ್ನು ಸಮಪರ್ಕವಾಗಿ ನಿಯಂತ್ರಣ ಮಾಡಿದಲ್ಲಿ ಉತ್ತಮ, ಗುಣಮಟ್ಟದ, ಅಧಿಕ ಇಳುವರಿ ಗೂಡು ಉತ್ಪಾದನೆ ಮಾಡಬಹುದು ಎಂದು ಶ್ರೀನಿವಾಸ್ ಹೇಳಿದ್ದಾರೆ.