ಸಿಕ್ಕಿಂನಲ್ಲಿ ಚಾಮ್ಲಿಂಗ್ ಚಾಮ್ರ್

|ಜ ಉಮೇಶ್ ಕುಮಾರ್ ಶಿಮ್ಲಡ್ಕ

ಸತತ 23 ವರ್ಷ 4 ತಿಂಗಳು 23 ದಿನಗಳಿಂದ ಒಂದು ರಾಜ್ಯದ ಆಡಳಿತ ಚುಕ್ಕಾಣಿಯನ್ನು ಒಬ್ಬರೇ ಹಿಡಿದಿದ್ದಾರೆ ಎಂದರೆ ಅಚ್ಚರಿಯೇ ಅಲ್ಲವೇ? ಇತ್ತೀಚೆಗೆ ಅಂದರೆ ಏ.29 (2018)ರಂದು ಪಶ್ಚಿಮ ಬಂಗಾಳದ ಜ್ಯೋತಿ ಬಸು ಅವರ ‘ಭಾರತದ ರಾಜ್ಯವೊಂದರ ದೀರ್ಘಾವಧಿ ಮುಖ್ಯಮಂತ್ರಿ (23 ವರ್ಷ 137 ದಿನ)’ ಎಂಬ ದಾಖಲೆಯನ್ನು ಅವರು ಮುರಿದರು.

ಹೌದು.. ಅವರು ಪವನ್ ಕುಮಾರ್ ಚಾಮ್ಲಿಂಗ್, ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ. 1994ರ ಡಿಸೆಂಬರ್ 12ರಂದು ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಅಲ್ಲಿಂದೀಚೆಗೆ ಸತತ ಐದನೇ ಸಲ 2014ರ ಮೇ 21ರಂದು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಈ ಸಲದ ಅಧಿಕಾರಾವಧಿ 2019ರ ಮೇ 21ರ ತನಕ ಮುಂದುವರಿಯಲಿದೆ.

ಪ್ರಸ್ತುತ ರಾಷ್ಟ್ರೀಯ, ರಾಜ್ಯ ರಾಜಕಾರಣಗಳನ್ನು ಗಮನಿಸುವಾಗ, ಒಂದು ರಾಜ್ಯದಲ್ಲಿ ಈ ರೀತಿ ದೀರ್ಘಾವಧಿಗೆ ಒಬ್ಬನೇ ಮುಖ್ಯಮಂತ್ರಿ ಆಡಳಿತ ನಡೆಸುವುದು ಇನ್ನು ಮುಂದೆ ಕಷ್ಟದ ಮಾತೇ ಆಗಿಬಿಡಬಹುದೇನೊ.. ಈ ಕಾರಣಕ್ಕಾಗಿ ಚಾಮ್ಲಿಂಗರಿಂದ ಈ ಸಾಧನೆ ಹೇಗೆ ಸಾಧ್ಯವಾಯಿತು ಎಂಬುದು ಅಧ್ಯಯನ ಯೋಗ್ಯ ವಿಚಾರವೇ ಸರಿ.

ಚಾಮ್ಲಿಂಗ್ ಸಿಕ್ಕಿಂನ ಐದನೇ ಮುಖ್ಯಮಂತ್ರಿ ಕೂಡ ಹೌದು. ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ, 1975ರ ತನಕವೂ ನೇಪಾಳೀಯರ ಪ್ರಾಬಲ್ಯವಿರುವ ಸಿಕ್ಕಿಂ ಚೋಗ್ಯಾಲ್ ವಂಶದ ರಾಜಪ್ರಭುತ್ವದಲ್ಲೇ ಇತ್ತು. ಮಹಾರಾಜಾ ಪಾಲ್ದೇನ್ ಟಿ ನಾಮ್್ಯಾಲ್ ಈ ರಾಜ್ಯವನ್ನಾಳಿದ 12ನೆಯ ಹಾಗೂ ಕೊನೆಯ ರಾಜ. ನಂತರದಲ್ಲಿ ಈ ರಾಜ್ಯವನ್ನು ಭಾರತದಲ್ಲಿ ಸೇರ್ಪಡೆಗೊಳಿಸಲು ಒಪ್ಪಂದ ಏರ್ಪಟ್ಟಿತು. ಹಾಗೆ 22ನೇ ರಾಜ್ಯವಾಗಿ ಸಿಕ್ಕಿಂ ಭಾರತಕ್ಕೆ ಸೇರಿಕೊಂಡಿತು. ಮೊದಲ ಬಾರಿಗೆ ಕಾಂಗ್ರೆಸ್ ಇಲ್ಲಿ ಆಡಳಿತ ಚುಕ್ಕಾಣಿ ಹಿಡಿಯಿತು. ಕೆ.ಎಲ್.ದೋರ್ಜಿ ಮುಖ್ಯಮಂತ್ರಿಯಾದರು. 1975 ಮೇ 16ರಿಂದ 1979ರ ಆಗಸ್ಟ್​ವರೆಗೆ ಈ ಆಳ್ವಿಕೆ ನಡೆಯಿತು. ಉಳಿದಂತೆ ಇಲ್ಲಿ ಪ್ರಾದೇಶಿಕ ಪಕ್ಷದ್ದೇ ಕಾರುಬಾರು. ಚಾಮ್ಲಿಂಗ್ ಸ್ಥಾಪಿಸಿದ ಎಸ್​ಡಿಎಫ್ ಕೂಡ ಪ್ರಾದೇಶಿಕ ಪಕ್ಷವೇ. ಅದು 1994ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅಲ್ಲಿ ಅಧಿಕಾರದಲ್ಲಿದ್ದುದು ಸಿಕ್ಕಿಂ ಸಂಗ್ರಾಮ ಪರಿಷದ್. ಈಗ ಈ ಪಕ್ಷ ಬಲಕಳೆದುಕೊಂಡಿದೆ.

1973ರಲ್ಲಿ ಸಿಕ್ಕಿಂ ಪ್ರಜಾತಂತ್ರ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಚಾಮ್ಲಿಂಗ್ 1982ರಲ್ಲಿ ಯಾನ್​ಗಾಂಗ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಮೊಟ್ಟ ಮೊದಲ ಬಾರಿಗೆ ದಮ್ತಾಂಗ್ ವಿಧಾನಸಭೆ ಕ್ಷೇತ್ರದಿಂದ ಗೆಲುವು ಕಂಡರು. ಎರಡನೇ ಸಲ ಮರು ಆಯ್ಕೆಯಾದರು. ಆಗ, ನರಬಹಾದುರ್ ಭಂಡಾರಿ ಸಚಿವ ಸಂಪುಟದಲ್ಲಿ 1989ರಿಂದ 1992ರ ತನಕ ಕೈಗಾರಿಕೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಸಚಿವರಾಗಿದ್ದರು. ಆ ನಂತರದಲ್ಲಿ ರಾಜ್ಯ ರಾಜಕೀಯದಲ್ಲಿ ಸನ್ನಿವೇಶಗಳು ಬದಲಾದವು. ಚಾಮ್ಲಿಂಗ್ ಸಿಕ್ಕಿಂ ಸಂಗ್ರಾಮ ಪರಿಷದ್ ಬಿಟ್ಟು ಹೊರಬಂದರು. 1993ರ ಮಾರ್ಚ್ 4ರಂದು ಎಸ್​ಡಿಎಫ್ ರಚಿಸಿದರು. ಮರುವರ್ಷವೇ ಚುನಾವಣೆ ಎದುರಿಸಿ, ಮುಖ್ಯಮಂತ್ರಿಯಾದರು ಕೂಡ. 1999, 2004, 2009 ಮತ್ತು 2014 ಹೀಗೆ ನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ವಿಜಯಿಯಾದರು. 2009ರ ಚುನಾವಣೆಯಲ್ಲಂತೂ ವಿಧಾನಸಭೆಯ ಎಲ್ಲ 32 ಸ್ಥಾನಗಳಲ್ಲಿ ಎಸ್​ಡಿಎಫ್ ಗೆಲುವು ಸಾಧಿಸಿ ದಾಖಲೆ ಬರೆಯಿತು. 2014ರ ಚುನಾವಣೆ ಸಂದರ್ಭದಲ್ಲಿ 32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯಲ್ಲಿ ಆಡಳಿತಾರೂಢ ಎಸ್​ಡಿಎಫ್ 22 ಸದಸ್ಯರನ್ನು ಹೊಂದಿದ್ದರೆ ಎದುರಾಳಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್​ಕೆಎಂ)ಗೆ 10 ಸದಸ್ಯರಿದ್ದರು. 2015ರಲ್ಲಿ ಈ 10 ಸದಸ್ಯರ ಪೈಕಿ ಏಳು ಸದಸ್ಯರು ಎಸ್​ಡಿಎಫ್ ಸೇರ್ಪಡೆಗೊಂಡಿದ್ದು, ಅದರ ಬಲ 29ಕ್ಕೆ ಏರಿಕೆಯಾಗಿದೆ.

ಈ ಎಲ್ಲ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕಡೆಗೆ ಚಾಮ್ಲಿಂಗ್ ಹೆಚ್ಚಿನ ಗಮನಹರಿಸಿದ್ದರಿಂದ ಅವರ ಜನಪ್ರಿಯತೆ ಹೆಚ್ಚುತ್ತಲೇ ಸಾಗಿದೆ.

2016ರ ತನಕವೂ ಕೇಂದ್ರದಲ್ಲಿ ಯಾವ ಸರ್ಕಾರವಿದ್ದರೂ ತಲೆಕೆಡಿಸಿಕೊಳ್ಳದಿದ್ದ

ಎಸ್​ಡಿಎಫ್ ಆ ವರ್ಷ ಬಿಜೆಪಿ ನೇತೃತ್ವದ ಎನ್​ಡಿಎ ಬಳಗ ಸೇರಿತು. ಈಶಾನ್ಯ ರಾಜ್ಯಗಳ ಇತರೆ ಕೆಲವು ಪಕ್ಷಗಳೂ ಎನ್​ಡಿಎ ಸೇರಿದ್ದು, ಎನ್​ಡಿಇಎ (ನಾರ್ತ್​ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್) ಮಾಡಿಕೊಂಡಿವೆ. 2016ರ ಜನವರಿಯಲ್ಲಿ ಭಾರತದ ಮೊಟ್ಟ ಮೊದಲ ‘ಸಾವಯವ ರಾಜ್ಯ’ ಎಂದು ಘೋಷಿಸಲ್ಪಟ್ಟಾಗ ಇಡೀ ದೇಶ ಆ ರಾಜ್ಯದತ್ತ ಗಮನಹರಿಸಿತು. 75,000 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಸಂಪೂರ್ಣವಾಗಿ ಸಾವಯವ ಪದ್ಧತಿ ಅಳವಡಿಸಿದ್ದು ವಿಶೇಷವಾಗಿತ್ತು. 2003ಕ್ಕೂ ಮೊದಲೇ ಇದಕ್ಕೆ ಪೂರ್ವಸಿದ್ಧತೆ ಮಾಡಿಕೊಂಡ ವ್ಯವಸ್ಥಿತ ಹಾಗೂ ಸಂಘಟಿತ ಪ್ರಯತ್ನದ ಫಲ ಇದು. ರಾಜ್ಯದಲ್ಲಿ ಸಾವಯವ ಕೃಷಿ ಅಳವಡಿಕೆಯಾಗಿದ್ದರೂ, ಆ ಮಾದರಿಯಲ್ಲಿ ಕೃಷಿ ವೆಚ್ಚ ಹೆಚ್ಚಾಗಿದ್ದು ಸಹಜವಾಗಿಯೇ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಬೆಲೆ ಸಿಗದೇ ಹೋದರೆ ಅಥವಾ ಆ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗದೇ ಹೋದರೆ

ಸಾವಯವ ಯೋಜನೆಯ ಪ್ರಯತ್ನ ವಿಫಲವಾಗಲಿದೆ ಎಂಬ ಮಾತುಗಳು ಸಹ ಅಲ್ಲಿ ಅನುರಣಿಸುತ್ತಿವೆ. ಇನ್ನು ಚಾರ್ವಿುಂಗ್ ವೈಯಕ್ತಿಕ ಬದುಕಿನತ್ತ ಗಮನಿಸಿದರೆ, ದಕ್ಷಿಣ ಸಿಕ್ಕಿಂನ ಯಾಂಗ್ಯಾಂಗ್​ನಲ್ಲಿ 1950ರ ಸೆ.22ರಂದು ಜನನ. ತಂದೆ ಆಶ್​ಬಹಾದುರ್ ಚಾಮ್ಲಿಂಗ್, ತಾಯಿ ಆಶಾರಾಣಿ. ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರುವ ಅವರು ಆರಂಭದಲ್ಲಿ ಕೃಷಿಕರಾಗಿದ್ದರು. ನಂತರ ಗುತ್ತಿಗೆದಾರರಾಗಿ, ಕ್ರಮೇಣ ರಾಜಕೀಯ ಪ್ರವೇಶಿಸಿದರು. ಧನ್ ಮಾಯಾ ಮತ್ತು ಟಿಕಾ ಮಾಯಾ ಎಂಬ ಇಬ್ಬರು ಪತ್ನಿಯರು. ನಾಲ್ವರು ಪುತ್ರರು, ನಾಲ್ವರು ಪುತ್ರಿಯರ ತುಂಬು ಕುಟುಂಬ ಅವರದ್ದು. ಸಾಹಿತ್ಯಪ್ರೇಮಿಯಾಗಿರುವ ಚಾಮ್ಲಿಂಗ್ 1977ರಲ್ಲಿ ನಿರ್ವಣ್ ಎಂಬ ಸಾಹಿತ್ಯ ನಿಯತಕಾಲಿಕೆ ಆರಂಭಿಸಿದ್ದರು. ಪವನ್ ಚಾಮ್ಲಿಂಗ್ ‘ಕಿರಣ್’ ಅವರ ಕಾವ್ಯನಾಮ. ಬಿರ್ ಕೋ ಪರಿಚಯ್(ಕವನ ಸಂಕಲನ) ಮೊದಲ ಪ್ರಕಟಿತ ಕೃತಿ. ನೇಪಾಳಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ಅವರ ಆಡಳಿತದ ಈ ಅವಧಿಯಲ್ಲಿ ಇನ್ನು ಒಂದು ವರ್ಷ ಬಾಕಿ ಇದ್ದು, ದೀರ್ಘಾವಧಿ ಆಡಳಿತದ ಕಾರಣ ಆಡಳಿತ ವಿರೋಧಿ ಅಲೆ ಎದ್ದರೆ ಮುಂದೇನು ಎಂಬ ಪ್ರಶ್ನೆಯೂ ಇದೆ. ಸದ್ಯದ ಮಟ್ಟಿಗೆ ಅಂತಹ ಲಕ್ಷಣಗಳು ಅಲ್ಲಿ ಗೋಚರವಾಗಿಲ್ಲ. ಅಷ್ಟೇ ಅಲ್ಲ, ಅವರ ಎದುರು ನಿಲ್ಲಬಲ್ಲ ನೇತಾರರೂ ಅಲ್ಲಿ ಕಾಣುತ್ತಿಲ್ಲ.

Leave a Reply

Your email address will not be published. Required fields are marked *