ಸಹಿಯಿಂದಾಗಿ ಹೆಸರಾದ ಶಾಂತಯ್ಯ

ಹೊನ್ನಾವರ: ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುತ್ತಿರುವ ಈ ಕಾಲದಲ್ಲಿ ವಿನೂತನವಾಗಿ, ವಿಶಿಷ್ಟವಾಗಿ ಏನು ಮಾಡಿದರೂ ಕ್ಷಣಾರ್ಧದಲ್ಲಿ ಅದು ಪ್ರಪಂಚದ ಮೂಲೆ-ಮೂಲೆ ತಲುಪುತ್ತದೆ. ಅದಕ್ಕೆ ಕಾರಣರಾದ ವ್ಯಕ್ತಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆಯುತ್ತಾನೆ.

ಇಂತಹದ್ದೊಂದು ಘಟನೆ ಹೊನ್ನಾವರದಲ್ಲಿ ನಡೆದಿದ್ದು. ಅದಕ್ಕೆ ಕಾರಣವಾಗಿದ್ದು ಮಾತ್ರ ಒಂದು ಸಹಿ. ಪ್ರತಿ ವ್ಯಕ್ತಿ ತನ್ನ ಮಾತೃ ಭಾಷೆಯಲ್ಲಿ ಅಥವಾ ಇಂಗ್ಲಿಷ್​ನಲ್ಲಿ ತನ್ನ ಪೂರ್ತಿ ಹೆಸರನ್ನು ಮೊಟಕುಗೊಳಿಸಿ, ಚುಟುಕಾಗಿ ಬರೆಯುತ್ತಾನೆ. ಇದನ್ನೇ ಆತ ಎಲ್ಲ ಕಡೆಯಲ್ಲಿಯೂ ಒಂದೇ ತೆರನಾಗಿ ಬರೆಯುತ್ತಾನೆ. ಸಹಿ ಸುಲಭದ್ದಾದರೆ, ಅದನ್ನು ಸುಲಭದಲ್ಲಿ ಅನುಕರಿಸಲೂಬಹುದು. ಬೆಂಗಳೂರು ಮೂಲದವರಾದ ಕೆ.ಎಸ್. ಶಾಂತಯ್ಯ ಅವರು ಹೊನ್ನಾವರದಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಮಾಡಿದ ಒಂದು ಸಹಿ ಸಾಮಾಜಿಕ ಜಾಲತಾಣದ ಮೂಲಕ ಜಗಜ್ಜಾಹೀರಾಗಿ ಎಲ್ಲರಿಗೂ ಅವರ ಗುರುತು ಸಿಗುವಂತೆ ಮಾಡಿದೆ. ಅವರು ಕಡತಗಳ ಮೇಲೆ ಸಹಿ ಹಾಕುವಾಗ ವಿಶೇಷವಾದ ಪೆನ್ನನ್ನು ಬಳಸುತ್ತಾರೆ. ಅವರ ಸಹಿ ಅತ್ಯಂತ ಕಲಾತ್ಮಕವಾಗಿದ್ದು, ಯಾರೂ ಸುಲಭದಲ್ಲಿ ನಕಲು ಮಾಡಲು ಸಾಧ್ಯವಿಲ್ಲ. ಇವರ ಸಹಿಯನ್ನು ಒಂದೊಂದು ದೃಷ್ಟಿಕೋನದಿಂದ ನೋಡಿದಾಗ ಒಂದೊಂದು ತೆರನಾಗಿ ಕಾಣಿಸುತ್ತದೆ. ಒಮ್ಮೆ ಶಂಖದಂತೆ, ಮತ್ತೊಮ್ಮೆ ಮರವನ್ನು ಸುತ್ತುವ ಬಳ್ಳಿಯಂತೆ, ಮಗದೊಮ್ಮೆ ಹಾರುವ ಹಕ್ಕಿಯಂತೆ ಕಾಣುವ ಇವರ ಸಹಿಯನ್ನು ಕಂಡವರೆಲ್ಲ ಬೆಕ್ಕಸ ಬೆರಗಾಗಿರುವುದಂತೂ ನಿಜ.

ಕಾಲೇಜ್ ಹುಡುಗರಂತೂ ಇವರ ಸಹಿ ನೋಡಿದಾಗ ಕುವೆಂಪು ಬರೆದಿರುವ ‘ದೇವರು ಋಜು ಮಾಡಿದನು’ ಪದ್ಯವೇ ನೆನಪಾಗುತ್ತದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇವರನ್ನು ಆರ್​ಬಿಐ ಗವರ್ನರ್ ಮಾಡಿದರೆ ಯಾರೂ ನಕಲಿ ನೋಟುಗಳನ್ನು ತಯಾರಿಸುವ ಗೋಜಿಗೇ ಹೋಗುವುದಿಲ್ಲ, ಅಷ್ಟು ಕಠಿಣವಾಗಿದೆ ಅವರ ಸಹಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇವರು ದಾಖಲೆ ಪತ್ರಕ್ಕೆ ಹಾಕಿದ ಸಹಿಯನ್ನು ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರಿಂದ ಶಾಂತಯ್ಯ ತುಂಬಾ ಪ್ರಸಿದ್ಧರಾಗಿದ್ದಾರೆ.

‘‘ನಾನು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೂ ನನ್ನ ಸಹಿ ಸುದ್ದಿಯಾಗಿತ್ತು. ನಾನು ಆರಂಭದಿಂದಲೂ ಇದೇ ತರಹದ ಸಹಿ ಮಾಡುತ್ತೇನೆ. ನನ್ನ ಸಹಿ ಎಲ್ಲರಿಗೂ ನನ್ನ ಗುರುತು ಸಿಗುವಂತೆ ಮಾಡಿದೆ. ಇದರಿಂದ ತುಂಬಾ ಸಂತೋಷವಾಗಿದೆ’’
| ಕೆ.ಎಸ್.ಶಾಂತಯ್ಯ, ಉಪನೋಂದಣಾಧಿಕಾರಿಗಳು ಹೊನ್ನಾವರ