ಹೆದ್ದಾರಿ, ಸರ್ವೀಸ್ ರಸ್ತೆಗಳಿಗೆ ಸಿಗ್ನಲ್ ಅಳವಡಿಕೆ

ಚನ್ನರಾಯಪಟ್ಟಣ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸರ್ವೀಸ್ ರಸ್ತೆಗಳಿಗೆ ಸಿಗ್ನಲ್ ಅಳವಡಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಕುವೆಂಪುನಗರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ, ನೀರಾವರಿ ಇಲಾಖೆ ವತಿಯಿಂದ 12 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕು ಕ್ರೀಡಾಂಗಣದಲ್ಲಿ 2, ಹೇಮಾವತಿ ಉದ್ಯಾನ, ರೈಲ್ವೆ ನಿಲ್ದಾಣ, ಮಾಧ್ಯಮಿಕ ಶಾಲಾ ಆವರಣ, ಹೌಸಿಂಗ್ ಬೋರ್ಡ್, ಎಪಿಎಂಸಿ ಆವರಣದಲ್ಲಿ ತಲಾ 1ರಂತೆ ಹೈಮಾಸ್ಟ್ ದೀಪ ಅಳವಡಿಸಲಾಗುವುದು, ಉದಯಗಿರಿ ಬಡಾವಣೆಯಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಎಸ್‌ಎಫ್‌ಸಿ ಯೋಜನೆಯಡಿ 3.50 ಕೋಟಿ ರೂ.ವೆಚ್ಚದಲ್ಲಿ ಪುರಸಭೆಯ ಆಡಳಿತ ಕಚೇರಿ ನಿರ್ಮಿಸಲಾಗುವುದು, ಗಣಪತಿ ಪೆಂಡಾಲ್ ಪಕ್ಕ 50 ಲಕ್ಷ ರೂ.ವೆಚ್ಚದಲ್ಲಿ ಸಾಹಿತ್ಯ ಭವನ ನಿರ್ಮಿಸಲಾಗುವುದು, ತಾಲೂಕು ಕ್ರೀಡಾಂಗಣದಲ್ಲಿ ಪೆವಿಲಿಯನ್ ಸೇರಿದಂತೆ ಅನೇಕ ಅಭಿವೃದ್ದಿ ಕೈಗೊಳ್ಳಲಾಗುತ್ತಿದೆ. 40 ಲಕ್ಷ ರೂ.ವೆಚ್ಚದಲ್ಲಿ ಜಿಮ್ನಾಸ್ಟಿಕ್ ಕೊಠಡಿ ನಿರ್ಮಾಣ ಮಾಡಿ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.
ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ 2 ನೇ ಹಂತದಲ್ಲಿ ಪಟ್ಟಣದ ವಿವಿದೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ಮೊದಲ ಹಂತದಲ್ಲಿ ಈಗಾಗಲೇ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಯಾವುದೇ ಅಡಚಣೆಯಿಲ್ಲದೇ ಕಾರ್ಯ ನಿರ್ವಹಿಸುತಿದ್ದು, ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗಿವೆ ಎಂದು ಮಾಹಿತಿ ನೀಡಿದರು.

ಪಟ್ಟಣದ 11ನೇ ವಾರ್ಡ್‌ನಲ್ಲಿ ಸಮುದಾಯ ಭವನ ನಿರ್ಮಿಸಲಿದ್ದು, ಶುದ್ದ ಕುಡಿಯುವ ನೀರಿನ ಘಟಕವನ್ನು ಆರಂಭಿಸಲು ಉದ್ದೇಶಿಸಲಾಗಿದೆ, ಎಪಿಎಂಸಿ ಆವರಣದಲ್ಲಿ 6 ಕೋಟಿ ರೂ.ವೆಚ್ಚದಲ್ಲಿ ನಬಾರ್ಡ್ ವತಿಯಿಂದ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್.ಎಂ.ನಾಗಪ್ಪ, ಸಹಪ್ರಾಧ್ಯಾಪಕ ಸಿದ್ದೇಗೌಡ, ಪುರಸಭಾ ಸದಸ್ಯರಾದ ಎಚ್.ಎನ್.ನವೀನ್, ಸಿ.ಎನ್.ಶಶಿಧರ್, ಎಪಿಎಂಸಿ ನಿರ್ದೇಶಕ ಎಂ.ಆರ್.ಅನಿಲ್ ಕುಮಾರ್ ಇದ್ದರು.