ನಾಲ್ಕನೇ ದಿನವೂ ಪೈಸೆಗಳಲ್ಲಿ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್​ ದರ

ನವದೆಹಲಿ: ಸತತ ನಾಲ್ಕನೇ ದಿನವೂ ಇಂಧನ ದರ ಪೈಸೆಗಳಲ್ಲಿ ಇಳಿಕೆಯಾಗಿದ್ದು, ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್​ ಸಿಕ್ಕಂತಾಗಿದೆ.

ಇಂದು ದೇಶಾದ್ಯಂತ ಪ್ರತಿ ಲೀಟರ್‌ ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್‌ ಬೆಲೆಯಲ್ಲಿ 17 ಪೈಸೆಯಷ್ಟು ಕಡಿಮೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್​ ದರ 82.44 ರೂ. ಮತ್ತು ಡೀಸೆಲ್​ ದರ 75.63 ರೂ.ಗಳಷ್ಟಿದೆ. ಸಿಲಿಕಾನ್​ ಸಿಟಿಯಲ್ಲಿ ಶನಿವಾರ ಪೆಟ್ರೋಲ್‌ ಪ್ರತಿ ಲೀಟರ್‌ಗೆ 39 ಪೈಸೆ ಮತ್ತು ಡೀಸೆಲ್‌ 12 ಪೈಸೆ ಇಳಿಕೆ ಕಂಡಿತ್ತು.

ನವದೆಹಲಿಯಲ್ಲಿ ಭಾನುವಾರ ಪೆಟ್ರೋಲ್​ ದರ 25 ಪೈಸೆ ಇಳಿಕೆ ನಂತರ 81.74 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್‌ 17 ಪೈಸೆ ಕಡಿಮೆಯಾಗಿದ್ದು, ಲೀ.ಗೆ 75.19 ರೂ.ಗಳಷ್ಟಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್‌ 87.21 ರೂ. ಆಗಿದ್ದು, ಲೀ. ಡೀಸೆಲ್‌ 78.82 ರೂ.ಗೆ ಮಾರಾಟವಾಗುತ್ತಿದೆ.

ದೇಶಾದ್ಯಂತ ಕಳೆದ ಕೆಲ ತಿಂಗಳಿನಿಂದಲೂ ಇಂಧನಬೆಲೆಯಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿತ್ತು. ಇಂಧನ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಹೆಚ್ಚಳ ಮತ್ತು ಇತರೆ ಅಂತಾರಾಷ್ಟ್ರೀಯ ಅಂಶಗಳಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣ ಎನ್ನಲಾಗಿತ್ತು. (ಏಜೆನ್ಸೀಸ್)