ಗುಳೇದಗುಡ್ಡ: ನೇಕಾರರ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಆಗ್ರಹಿಸಿ ಪವರ್‌ಲೂಮ್ ನೇಕಾರರು ಸ್ಥಳೀಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟಿಸಿದರು.
ನೇಕಾರ ಮುಖಂಡ ಅಶೋಕ ಹೆಗಡೆ ಮಾತನಾಡಿ, ಗುಳೇದಗುಡ್ಡ ಪಟ್ಟಣದ ಜನರ ಮುಖ್ಯ ಉದ್ಯೋಗ ನೇಕಾರಿಕೆಯಾಗಿದೆ. ಇತ್ತೀಚೆಗೆ ನೇಕಾರಿಕೆ ಉದ್ಯೋಗ ಕುಂಠಿತಗೊಂಡಿದ್ದು, ನೇಕಾರರು ನೇಯ್ದ ಖಣಗಳು ಮಾರುತ್ತಿಲ್ಲ. ಸಬ್ಸಿಡಿ ದರದಲ್ಲಿ ನೀಡುತ್ತಿರುವ ವಿದ್ಯುತ್ ಬಿಲ್ ಕಟ್ಟುವುದೂ ನೇಕಾರರಿಗೆ ಹೊರೆಯಾಗಿದೆ. ರಾಜ್ಯ ಸರ್ಕಾರ 10 ಎಚ್‌ಪಿವರೆಗೂ ಉಚಿತ ವಿದ್ಯುತ್ ಹಾಗೂ 20 ಎಚ್‌ಪಿವರೆಗೆ 1.25 ರೂ. ದರದಲ್ಲಿ ನೀಡಲಾಗುವುದೆಂದು ಸರ್ಕಾರ ತಿಳಿಸಿದೆ. ಆದರೆ, ಈ ಬಗ್ಗೆ ಇಲಾಖೆಗೆ ಆದೇಶ ನೀಡಿಲ್ಲ. ಕೂಡಲೇ ಸರ್ಕಾರ ಆದೇಶ ನೀಡಬೇಕೆಂದು ಆಗ್ರಹಿಸಿದರು.
ನೇಕಾರರ ಕುಟುಂಬಗಳು ವಿದ್ಯುತ್ ಮಗ್ಗಗಳಿಂದಲೇ ಜೀವನ ನಡೆಸುತ್ತಿದ್ದು, ವಿದ್ಯುತ್ ಬಿಲ್ ಕಟ್ಟದೆ ಇರುವ ನೇಕಾರರ ಮಗ್ಗಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂನವರು ಕಟ್ ಮಾಡುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರಲ್ಲದೆ, ನೇಕಾರರ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಪ್ರಕಾಶ ಪೋಚಗುಂಡಿ, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ನಿಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಶಿವಾನಂದ ಯಣ್ಣಿ, ಕೂಡ್ಲೆಪ್ಪ ಕಲ್ಯಾಣಿ, ಶ್ರೀಕಾಂತ ಹುನಗುಂದ, ಮೋಹನ ಮಲಜಿ, ಮಂಜುನಾಥ ಭಾವಿ, ಮಂಜುನಾಥ ಹಣಗಿ, ಶಿವಶಂಕ್ರಪ್ಪ ಸಾರಂಗಿ, ಈರಣ್ಣ ನನ್ನಾ, ಮಹಾಗುಂಡಪ್ಪ ಹಾನಾಪೂರ, ಭದ್ರಪ್ಪ ಪರಗಿ, ಬೊಮ್ಮಣ್ಣ ರೋಜಿ, ಸಿದ್ದಬಸಪ್ಪ ಕೆಲೂಡಿ, ಕೊಪ್ಪೇಶ ಯಣ್ಣಿ, ಬಸವರಾಜ ಜವಳಗಿ, ಉಲ್ಲಾಸ ಹುಗ್ಗಿ, ಅಮರೇಶ ಕೊಳ್ಳಿ, ಪಿ.ಎಸ್. ಕಂಠಿಗೌಡರ, ಯೋಗೇಶ ವಾಳದುಂಕಿ, ಗೋಪಾಲ ದೂಪದ, ಮಲ್ಲಿಕಾರ್ಜುನ ರಾಜನಾಳ ಇತರರಿದ್ದರು.