ಸಿಧು ಯೂಟರ್ನ್: ಇಮ್ರಾನ್‌ ಆಹ್ವಾನದ ಮೇರೆಗೆ ಪಾಕ್‌ಗೆ ಹೋಗಿದ್ದೆ, ರಾಹುಲ್‌ ಗಾಂಧಿ ಆದೇಶದಿಂದಲ್ಲ!

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಇದೀಗ ಯೂಟರ್ನ್‌ ತೆಗೆದುಕೊಂಡಿದ್ದು, ಅವರ ಹೇಳಿಕೆಯನ್ನೇ ನಿರಾಕರಿಸಿದ್ದಾರೆ.

ಯಾರನ್ನೇ ಆದರೂ ವಿರೂಪಗೊಳಿಸುವ ಮುನ್ನ ಸತ್ಯವನ್ನು ತಿಳಿದುಕೊಳ್ಳಿ. ರಾಹುಲ್‌ ಗಾಂಧಿ ಅವರು ನನ್ನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳಿಲ್ಲ. ಬದಲಿಗೆ ಇಮ್ರಾನ್‌ ಖಾನ್‌ರ ವೈಯಕ್ತಿಕ ಆಹ್ವಾನದ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ಹೇಳಿ ಟ್ವೀಟ್‌ ಮಾಡಿದ್ದಾರೆ.

ನವೆಂಬರ್‌ 28ರಂದು ಸಿಧು ಪಾಕಿಸ್ತಾನ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ನ ಶಂಕುಸ್ಥಾಪನೆ ಅಂಗವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.

ಕ್ರಿಕೆಟರ್‌ ಕಮ್‌ ರಾಜಕಾರಣಿ ಸಿಧು ಅವರ ಪಾಕ್‌ ಭೇಟಿಗೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ನ. 28ರಂದು ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಧು, ಶುಕ್ರವಾರವಷ್ಟೇ ಪಾಕ್‌ ಭೇಟಿಯನ್ನು ಸಮರ್ಥಿಸಿಕೊಂಡಿದ್ದರು. ರಾಹುಲ್‌ ಗಾಂಧಿ ಅವರೇ ನನ್ನನ್ನು ಪಾಕ್‌ಗೆ ಹೋಗುವಂತೆ ಹೇಳಿದ್ದರು ಎಂದು ಹೇಳಿಕೆ ನೀಡಿದ್ದರು. (ಏಜೆನ್ಸೀಸ್)

ರಾಹುಲ್ ಗಾಂಧಿ ನನ್ನ ಕ್ಯಾಪ್ಟನ್