ಚಿತ್ರ: ಸಿದ್ಲಿಂಗು-2
ನಿರ್ದೇಶನ: ವಿಜಯಪ್ರಸಾದ್
ತಾರಾಗಣ: ಯೋಗೇಶ್, ಸೋನು ಗೌಡ, ವಿಜಯ ಪ್ರಸಾದ್, ಸುಮನ್ ರಂಗನಾಥ್, ಮಂಜುನಾಥ್ ರಾಧಾಕೃಷ್ಣ, ಮಂಜುನಾಥ್ ಹೆಗ್ಡೆ ಮತ್ತಿತರರು.
ಶಿವ ಸ್ಥಾವರಮಠ
ನಿರ್ದೇಶಕ ವಿಜಯಪ್ರಸಾದ್ ಕಥೆ ಹೇಳುವ ರೀತಿಯೇ ವಿಭಿನ್ನ. ಗಂಭೀರ ವಿಷಯಗಳನ್ನು ನವಿರಾದ ಹಾಸ್ಯದ ಜತೆ ಮನಮುಟ್ಟುವಂತೆ ಹೇಳುತ್ತಾರೆ. ಈ ಪ್ರಯೋಗ ಮತ್ತೆ ಅವರ ‘ಸಿದ್ಲಿಂಗು-2’ದಲ್ಲಿ ಮುಂದುವರಿದಿದೆ. ಇದು ‘ಸಿದ್ಲಿಂಗು’ ಸೀಕ್ವೆಲ್ ಆಗಿದ್ದು, ಮೊದಲ ಭಾಗದಲ್ಲಿ ಸಿದ್ಲಿಂಗು, ಮಂಗಳ ಮಿಸ್ (ರಮ್ಯಾ), ಅಸಾದುಲ್ಲಾ ಬೇಗ್ (ಶ್ರೀಧರ್) ಹಾಗೂ ಕಾರನ್ನು ಕಳೆದುಕೊಂಡಿರುತ್ತಾನೆ. ಈ ಭಾಗದಲ್ಲಿ ಕಳೆದುಕೊಂಡ ಎರಡು ಸಂಬಂಧಗಳು ಹಾಗೂ ಕಾರು ಹೇಗೆ ಮರಳಿ ಪಡೆಯುತ್ತಾನೆ ಎಂಬುದು ಕಥೆ.
ವಿಜಯ ಪ್ರಸಾದ್ ಇಲ್ಲಿ ತಮ್ಮದೇ ಶೈಲಿಯ ಆಧ್ಯಾತ್ಮ ಹಾಗೂ ಲೌಕಿಕ ಜೀವನವನ್ನು ನಿರೂಪಿಸಿದ್ದಾರೆ. ಇಡೀ ಕಥೆಯಲ್ಲಿ ಸಿದ್ಲಿಂಗು ಮುಖ್ಯವಾದರೂ, ಆತನ ಗುರಿ ‘ಕಾರು’ ಕೇಂದ್ರಿತವಾಗಿದೆ. ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೂ ಕಥೆ ಬೋರ್ ಎನಿಸುವುದಿಲ್ಲ. ದೃಶ್ಯಕ್ಕೆ ತಕ್ಕಂತೆ ಸಹಜ ಹಾಸ್ಯದ ಅಂಶಗಳಿವೆ. ವಿಜಯ ಪ್ರಸಾದ್ ಸಂಭಾಷಣೆಯಲ್ಲಿ ಹಾಸ್ಯ, ವ್ಯಂಗ್ಯ, ವಿಡಂಬನೆ ಇದ್ದು, ಆದರೆ, ಈ ಹಿಂದಿನ ಚಿತ್ರಗಳಲ್ಲಿ ಕಂಡುಬರುತ್ತಿದ್ದ ಡಬಲ್ ಮೀನಿಂಗ್ ಸಂಭಾಷಣೆ ಇಲ್ಲಿ ಕಾಣುವುದಿಲ್ಲ. ಆಗಾಗ ಬಂದು ಕಥೆ ಮುಂದುವರಿಸುವ ಅಯ್ಯಪ್ಪ ಮಾಲಾಧಾರಿ (ವಿಜಯ ಪ್ರಸಾದ್) ಕಥೆ ಬಿಟ್ಟುಕೊಟ್ಟರು ಎನಿಸಬಹುದು, ಕೊನೆಗೆ ಸಿಗುವ ‘ತಿರುವು’ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸುತ್ತದೆ. ಅಲ್ಲಲ್ಲಿ ಮೊದಲ ಭಾಗದ ಚಿತ್ರಣ ನೀಡಿರುವ ಕಾರಣ ಸೀಕ್ವೆಲ್ ನೋಡಬೇಕಾದರೆ ಮೊದಲ ಭಾಗವನ್ನು ನೋಡಿರಲೇಬೇಕು ಎಂದೆನಿಸುವುದಿಲ್ಲ.
ಕಥೆಯಲ್ಲಿ ‘ಸಿದ್ಲಿಂಗು’ ಯೋಗೀಶ್ ಸಹಜವಾಗಿ ಅಭಿನಯಿಸಿದ್ದು, ಪಾತ್ರದಲ್ಲಿ ಪ್ರಬುದ್ಧತೆ ಕಂಡುಬರುತ್ತದೆ. ನಿವೇದಿತಾ ಟೀಚರ್ ಪಾತ್ರದಲ್ಲಿ ಸೋನು ಗೌಡ ಮುಗ್ಧವಾಗಿ ಅಭಿನಯಿಸಿದ್ದಾರೆ. ಕನ್ನಡಕ ಧರಿಸಿ, ಥೇಟ್ ಟೀಚರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾವ-ಭಾವ, ಎಮೋಷನ್ ದೃಶ್ಯಗಳಲ್ಲಿ ಅವರ ಪಾತ್ರ ಎದ್ದು ಕಾಣುತ್ತದೆ. ಮಂಜುನಾಥ್ ಹೆಗ್ಡೆ, ಮಂಜುನಾಥ್ ರಾಧಾಕೃಷ್ಣ, ಸೀತಾ ಕೋಟೆ, ಬಿ.ಸುರೇಶ್, ಪದ್ಮಜಾ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಅನೂಪ್ ಸೀಳಿನ್ ಸಂಗೀತ ಆಪ್ತವಾಗಿದೆ.