ಇಂಡಿ: ತಾಲೂಕಿನ ಸಾವಳಸಂಗ ಗುಡ್ಡವನ್ನು ಅರಣ್ಯ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 271 ಎಕರೆ ಪ್ರದೇಶದಲ್ಲಿ ಹಸಿರೀಕರಣ ಮಾಡಲಾಗಿದೆ. ರೈತರು ಇನ್ನೂ 50 ಎಕರೆ ಜಾಗ ನೀಡಿದರೆ ಅರಣ್ಯಪ್ರದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಉದ್ಯಾನ ಅಭಿವೃದ್ಧಿ ಕುರಿತು ಶುಕ್ರವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಗುಡ್ಡದ ಅಕ್ಕ ಪಕ್ಕದ ರೈತರು ಸ್ವಯಂ ಪ್ರೇರಣೆಯಿಂದ ಪರಿಹಾರಾತ್ಮಕ ನೆಡುತೋಪು ನಿರ್ಮಾಣ ಮಾಡಲು ಜಮೀನು ನೀಡುವ ರೈತರಿಗೆ ಸರ್ಕಾರದಿಂದ ಯೋಗ್ಯ ಬೆಲೆ ನೀಡಿ ಜಮೀನು ಖರೀದಿಸಲಾಗುವುದು ಎಂದರು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮಂಜುನಾಥ ಧೂಳೆ ಮಾತನಾಡಿ, ಈ ವನ್ಯಧಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಯೋಜನೆಗಳನ್ನು ರೂಪಿಸಿದೆ. ಮಕ್ಕಳ ಉದ್ಯಾನ, ಸೈಕಲ್ ಟ್ರಾೃಕ್, ಸಿದ್ಧೇಶ್ವರ ಶ್ರೀಗಳು ಪ್ರವಚನ ಹೇಳುತ್ತಿದ್ದ ಸ್ಥಳಕ್ಕೆ ಸಿಸಿ ರಸ್ತೆ, ಬೃಹತ್ ಪ್ರವೇಶ ದ್ವಾರ, ವಿವ್ ಪಾಯಿಂಟ್, ವಾಚರ್ ರೂಮ್ ನಿರ್ಮಾಣ, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ ಮಾತನಾಡಿ, ಇಲ್ಲಿ ಸಿದ್ಧೇಶ್ವರ ಗುಡ್ಡ, ಲಿಂಗೇಶ್ವರ ಗುಡ್ಡ, ಅರವಕ್ಕಿ ಗುಡ್ಡ ಎಂಬ ಪ್ರಮುಖ ಮೂರು ಸ್ಥಳಗಳಿವೆ. 10-12 ತಳಿಯ 31 ಸಾವಿರ ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದು ಬೆಟ್ಟಕ್ಕೆ ಮುಕುಟದಂತೆ ಗೋಚರಿಸುತ್ತಿದೆ. ಎರಡು ಕೆರೆಗಳು ಅಲ್ಲಲ್ಲಿ ನಾಲ್ಕು ಚೆಕ್ ಡ್ಯಾಂಗಳು ಇದ್ದು ನವಿಲು, ಮೊಲ, ತೋಳ ಸೇರಿದಂತೆ ವಿವಿಧ ಪ್ರಾಣಿಗಳು ವಾಸವಾಗಿವೆ. ಈ ಪ್ರದೇಶಕ್ಕೆ ಸಿದ್ಧೇಶ್ವರ ಸ್ವಾಮೀಜಿ ವನ್ಯಧಾಮ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಇನ್ನು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ. ಅದಕ್ಕಾಗಿ ರೈತರು ಜಮೀನು ನೀಡುವುದು ಅವಶ್ಯಕತೆ ಇದೆ ಎಂದರು.
ರೈತರು 200 ಎಕರೆ ಪ್ರದೇಶವನ್ನು ಸಿದ್ಧೇಶ್ವರ ಶ್ರೀಗಳ ಉದ್ಯಾನವನಕ್ಕೆ ನೀಡುವುದಾಗಿ ಎಸಿ ಅವರಿಗೆ ವಾಗ್ದಾನ ಮಾಡಿದರು.
ಗ್ರಾ.ಪಂ ಅಧ್ಯಕ್ಷೆ ಸಾವಿತ್ರಿ ಮೋರೆ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಎಸ್.ಜಿ.ಲೋಣಿ, ಯಲ್ಲಪ್ಪ ಪೂಜಾರಿ, ಪ್ರಗತಿಪರ ರೈತರಾದ ರಾಜೇಂದ್ರ ಮೊರೆ, ಶಂಕ್ರೆಪ್ಪ ಮೆಂಡೆಗಾರ, ಆನಂದ ರಾಠೋಡ, ಬಾಳಪ್ಪ ಮಾದರ, ಸೋಮಣ್ಣ ಮಾದರ, ಚಂದ್ರಕಾಥ ಬಮ್ಮನಹಳ್ಳಿ, ಸುಭದ್ರ ಬನ್ನಿಗಿಡ, ಮಲ್ಲಿಕಾರ್ಜುನ ವಾಲಿಕಾರ, ಕುಮಾರಗೌಡ ಪಾಟೀಲ, ವಿನೋದ ಪಾಟೀಲ ಇತರರಿದ್ದರು.