ಬಾಲ ಕಾರ್ಮಿಕ ನಿರ್ಮೂಲನೆ ಶಿಕ್ಷಣ, ಜಾಗೃತಿಯಿಂದ ಸಾಧ್ಯ

ವಿಜಯವಾಣಿ ಸುದ್ದಿಜಾಲ ಬೀದರ್
ಬಾಲ ಕಾರ್ಮಿಕ ಪದ್ಧ್ದತಿ ಜಾಗತಿಕ ಸಮಸ್ಯೆ. ಇದನ್ನು ಕಾನೂನು ಅಷ್ಟೇ ಅಲ್ಲ ಶಿಕ್ಷಣ ಹಾಗೂ ಜಾಗೃತಿ ಮೂಲಕ ನಿರ್ಮೂಲನೆ ಸಾಧ್ಯ ಎಂದು ಹೈದರಾಬಾದ್ ಗ್ಲೋಕಲ್ ಸಂಶೋಧನಾ ಕೇಂದ್ರದ ಡಾ. ಡಿ.ವೆಂಕಟೇಶ್ವರಲು ಹೇಳಿದರು.

ನಗರದ ಸಿದ್ಧಾರ್ಥ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಂಗಳವಾರ ಚಾಲನೆ ನೀಡಿ, ಬಾಲ ಕಾರ್ಮಿಕರ ಬಗ್ಗೆ ಸ್ಥಳೀಯ ಸನ್ನಿವೇಶಕ್ಕೆ ತಕ್ಕಂತೆ ಚಿಂತನೆ ನಡೆಸಿ ಬಗೆಹರಿಸುವ ಅಗತ್ಯವಿದೆ. ಕರ್ನಾಟಕದಲ್ಲಿ ಬಾಲ ಕಾರ್ಮಿಕರ ಕುರಿತು ಅನೇಕ ರೀತಿಯ ಸಮಸ್ಯೆಗಳಿದ್ದು, ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಮಾಜವು ಬಾಲ ಕಾರ್ಮಿಕ ಪದ್ಧತಿ ನಿರಾಕರಿಸಬೇಕು. ಶಿಕ್ಷಣ ಮತ್ತು ಜಾಗೃತಿಯಿಂದ ಇದು ಸಾಧ್ಯ ಎಂದರು.

ಶೈಕ್ಷಣಿಕ ಹಕ್ಕು 2009 ಬಾಲ ಕಾರ್ಮಿಕ ಪದ್ಧ್ದತಿ ನಿರ್ಮೂಲನೆಗೆ ಸಹಾಯಕಾರಿಯಾಗಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದರಿಂದ ಹಂತ ಹಂತವಾಗಿ ಈ ಸಮಸ್ಯೆ ಕಡಿಮೆಯಾಗುತ್ತದೆ. ಕೃಷಿ ಸೇರಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಅನೇಕ ಬಾಲ ಕಾರ್ಮಿಕರು ದುಡಿಯುತ್ತಿರುವುದು ವಿಷಾದನೀಯ ಎಂದರು.
ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಎ.ಜೆ. ಖಾನ್ ಮಾತನಾಡಿದರು. ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಮಾರುತಿರಾವ ಮಾಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಎಂ.ಎಸ್. ಖರ್ಗೆ , ಸಂಯೋಜಕ ಪ್ರೊ.ನಂದಾ ಮೇರ್ವೆನ್ ಡೇವಿಡ್, ಪ್ರೊ.ಜಗದೇವಪ್ಪ ಚಕ್ಕಿ ಇದ್ದರು.