ಶ್ರೀ ಸಿದ್ಧೇಶ್ವರಸ್ವಾಮಿ ರಥೋತ್ಸವ

ಕೊಪ್ಪ: ತಾಲೂಕಿನ ಸಿದ್ಧರಮಠ ಶ್ರೀ ಸಿದ್ಧೇಶ್ವರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ಸಕಲ ಪೂಜಾ ವಿಧಿಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ರಥೋತ್ಸವದ ಪ್ರಯುಕ್ತ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಪೂರ್ವಭಾವಿ ಪೂಜೆಗಳು ಜರುಗಿದವು. ಮಧ್ಯಾಹ್ನ ಸಿದ್ಧೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅರ್ಚಕರು ತಲೆ ಮೇಲೆ ಹೊತ್ತು ದೇವಸ್ಥಾನ ಪ್ರದಕ್ಷಿಣೆ ಹಾಕಿದರು. ಮಂಗಳವಾದ್ಯ, ಮಹಿಳಾ ಚಂಡೆಮೇಳ ಮತ್ತಿತರೆ ವಾದ್ಯಮೇಳ, ಭಕ್ತರ ಜಯಘೊಷದೊಂದಿಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ರಥಕ್ಕೆ ಹೂ, ಹಣ್ಣು, ಧಾನ್ಯಗಳನ್ನು ಎರಚಿ ಭಕ್ತಿ ಸಮರ್ಪಿಸಿದರು. ನಂತರ ದೇವಸ್ಥಾನದ ಸಮೀಪವಿರುವ ಕಟ್ಟೆಯವರೆಗೆ ರಥ ಎಳೆಯಲಾಯಿತು. ರಾತ್ರಿ ಗ್ರಾಮದ ಪ್ರಮುಖ ಬೀದಿಯಲ್ಲಿ ರಥೋತ್ಸವ ನೆರವೇರಿತು.

ಸಿದ್ದರಮಠ, ಕೆಸವೆ, ಕೆಳಕುಳಿ, ಸೀತೂರು, ಕರಿಗೆರಸಿ, ಮೃಗವಧೆ, ಚೌಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಗೆ ಹಣ್ಣುಕಾಯಿ, ಹೂ ಸಮರ್ಪಿಸಿದರು. ದೇವಸ್ಥಾನ ವ್ಯವಸ್ಥಾಪಕ ಸತೀಶ್ ಇತರರು ಭಾಗವಹಿಸಿದ್ದರು. ರಥೋತ್ಸವದ ಪ್ರಯುಕ್ತ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.