ಸಿದ್ಧಗಂಗೆಯಲ್ಲಿ ಎಂದೂ ನಿಲ್ಲದ ದಾಸೋಹ ಇಂದೂ ನಿಂತಿಲ್ಲ: ಭಕ್ತರಿಗೆ ಮಠದಿಂದಲೇ ಉಪಹಾರ

ತುಮಕೂರು: ತ್ರಿವಿಧ ದಾಸೋಹಿಯಾಗಿ ಇಹಲೋಕ ತ್ಯಜಿಸಿದ ಶ್ರೀಗಳ ಅಂತಿಮ ದರ್ಶನದ ದಿನದಂದು ಕೂಡ ಸಿದ್ಧಗಂಗೆಯಲ್ಲಿ ದಾಸೋಹದ ಕಾಯಕ ನಿಂತಿಲ್ಲ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ. ಮಠದಲ್ಲಿ ಬೆಳಗ್ಗೆ 5.30 ರಿಂದಲೇ ಭಕ್ತರಿಗೆ ಉಪಹಾರ ವಿತರಣೆ ಆರಂಭವಾಗಿದೆ. ಶ್ರೀ ಮಠದ ವಿದ್ಯಾರ್ಥಿಗಳೇ ಭಕ್ತರಿಗೆ ಉಪಹಾರವನ್ನು ವಿತರಿಸುತ್ತಿದ್ದಾರೆ.

ಸ್ವಯಂಪ್ರೇರಿತರಾಗಿಯೇ ಬೆಳ್ಳಂ ಬೆಳಗ್ಗೆ ಬಾಣಸಿಗರು ಉಪ್ಪಿಟ್ಟು ತಯಾರಿಸಿದ್ದು, ವಸ್ತು ಪ್ರದರ್ಶನ ಮೈದಾನದಲ್ಲಿ ಮಕ್ಕಳು ಉಪ್ಪಿಟ್ಟು ವಿತರಿಸುತ್ತಿದ್ದಾರೆ.

ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ಸಿದ್ಧಗಂಗಾ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಹಸ್ರಾರು ವಿದ್ಯಾರ್ಥಿಗಳು ಶ್ರಮದಾನ ಕೈಗೊಂಡಿದ್ದಾರೆ. ನಡುರಾತ್ರಿಯೂ ನಿಲ್ಲದ ಅನ್ನದಾಸೋಹಕ್ಕಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮಠದಲ್ಲಿ ತರಕಾರಿ ಕತ್ತರಿಸುತ್ತಿದ್ದಾರೆ. ಮಠದ ಆವರಣದಲ್ಲೇ ಹತ್ತಾರು ಕಡೆ ಅನ್ನದಾಸೋಹ ನಡೆಯುತ್ತಿದ್ದು, ಮಧ್ಯರಾತ್ರಿಯೂ ಪ್ರಸಾದ ಸೇವನೆಗೆ ಭಕ್ತರು ಮುಗಿಬಿದ್ದಿದ್ದರು. (ದಿಗ್ವಿಜಯ ನ್ಯೂಸ್)