ನಡೆದಾಡುವ ದೇವರ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟರು

ತುಮಕೂರು: ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕಾಗಿ ಸ್ಯಾಂಡಲ್‌ವುಡ್‌ನ ನಟರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆದರು. ಬಹಳ ಹೊತ್ತಿನಿಂದಲೂ ವೇದಿಕೆ ಮೇಲೆ ಕುಳಿತು ಶ್ರೀಗಳ ಅಂತಿಮ ದರ್ಶನವನ್ನು ಪಡೆದರು.

ನಟ ಜಗ್ಗೇಶ್‌ ಕೂಡ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿ, ಕಲ್ಪತರು ನಾಡಿನ ನಡೆದಾಡುವ ದೇವರು ಶ್ರೀಗಳು. ರಾಘವೇಂದ್ರ ಸ್ವಾಮಿಗಳ ರೀತಿಯಲ್ಲೇ, ಶಿವಕುಮಾರ ಸ್ವಾಮಿಗಳಿಗೂ ಬಹಳ ನಿಷ್ಠೆಯಿಂದ ಇದ್ದೇನೆ. ಶ್ರೀಗಳು ಆಧುನಿಕ ಕೃಷ್ಣ, ಶಿವನ ಸ್ವರೂಪ. ಅನ್ನದಲ್ಲಿ ದೇವರಿದ್ದಾನೆ ಅಂತ ತೋರಿಸಿದವರು. ವಿದ್ಯೆ ಕೊಟ್ಟು ಅನೇಕರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ ಎಂದರು.

ಈ ವಿಶ್ವಕ್ಕೆ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ. ಶ್ರೇಷ್ಠ ಕಾವಿಧಾರಿಗಳಿಗೆ ಇವರೊಬ್ಬರು ಮಾದರಿ. ಅವರ ನಿರ್ಗಮನ ಕೂಡ ಶ್ರೇಷ್ಠವಾಗಿದೆ. ಶಿವನಿಗೆ ಪ್ರಿಯವಾದ ದಿನದಂತೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ನಾನು ಅತ್ಯಂತ ಭಾಗ್ಯಶಾಲಿ. ಎರಡು ವರ್ಷದ ಹಿಂದೆ ಶ್ರೀಗಳ ಪಾದುಕೆ ತೆಗೆದುಕೊಂಡು ಪೂಜೆ ಮಾಡಿದ್ದೆ. ನನ್ನ ಆತ್ಮದಲ್ಲಿ ಶ್ರೀಗಳಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕ ಸಾಯಿ ಪ್ರಕಾಶ್‌ ಮಾತನಾಡಿ, ಕರ್ನಾಟಕಕ್ಕೆ ಬಂದಾಗ 10 ಬಾರಿ ಕಾರ್ಯಕ್ರಮಗಳಲ್ಲಿ ಶ್ರೀಗಳನ್ನು ಭೇಟಿ ಮಾಡಿದ್ದೇನೆ. ಶ್ರೀಗಳು ಶಿವನ ಅನುಯಾಯಿಯಾಗಿದ್ದಾರೆ. ದೇವರು ನಮ್ಮ ಹೃದಯದಲ್ಲಿದ್ದಾನೆ. ಅದರಂತೆ ಶ್ರೀಗಳು ಕೂಡ ನಮ್ಮೆಲ್ಲರ ಹೃದಯದಲ್ಲಿಯೇ ನೆಲೆಸಿರುತ್ತಾರೆ ಎಂದು ಹೇಳಿದರು.

ಇದಲ್ಲದೆ ನಟ ದರ್ಶನ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸೇರಿ ಹಲವು ನಟರು ಶ್ರೀಗಳ ದರ್ಶನ ಪಡೆದರು. (ದಿಗ್ವಿಜಯ ನ್ಯೂಸ್)