4ಕ್ಕೆ ಅಂತಿಮ ದರ್ಶನ ಮುಕ್ತಾಯ, 5ಕ್ಕೆ ಗದ್ದುಗೆ ಬಳಿಗೆ ಪಾರ್ಥಿವ ಶರೀರ: ಪರಮೇಶ್ವರ್‌

ತುಮಕೂರು: ಕಿರಿಯ ಶ್ರೀ ಮತ್ತು ಸುತ್ತೂರು ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಸಂಜೆ 4 ಗಂಟೆಗೆ ಶ್ರೀಗಳ ಅಂತಿಮ ದರ್ಶನ ಮುಕ್ತಾಯವಾಗುತ್ತದೆ. ಸಂಜೆ 5 ಗಂಟೆಗೆ ಇಲ್ಲಿಂದ ಗದ್ದುಗೆ ಬಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.

ಸಂಜೆ 6 ಅಥವಾ 7 ಗಂಟೆ ವೇಳೆಗೆ ಶ್ರೀಗಳ ಅಂತ್ಯ ಸಂಸ್ಕಾರ ಕಾರ್ಯ ಪೂರ್ಣಗೊಳ್ಳಲಿದೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿವರೆಗೆ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಧ್ಯಮಗಳು ಮತ್ತು ಮಠದಲ್ಲಿ ಅಳವಡಿಸಿರುವ ದೊಡ್ಡ ಸ್ಕ್ರೀನ್‌ ಮೂಲಕ ಭಕ್ತರು ನೋಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಅಂತಿಮ ಸಂಸ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಠದಲ್ಲಿ ಪುದುಚೇರಿ ಸಿಎಂ ನಾರಾಯಣಸ್ವಾಮಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳು ಶಿಕ್ಷಣ ಮತ್ತು ಸೇವೆಗೆ ಹೆಸರಾಗಿದ್ದವರು. ಮಾನವೀಯ ನೆಲೆಗಟ್ಟಿನಲ್ಲಿ ಸಾಮಾಜಿಕ ಸೇವೆಯನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಕಣ್ಣುಗಳನ್ನು ತೆರೆಸಿ ದೇಶದ ಉತ್ತಮ ನಾಗರಿಕರನ್ನಾಗಿ ಮಾಡಿದ್ದಾರೆ. ಲಕ್ಷಾಂತರ ಯುವಕರಿಗೆ ಶಿಕ್ಷಣ ನೀಡಿದ್ದಾರೆ. ಇಲ್ಲಿ ನೆರೆದಿರುವ ಸಹಸ್ರಾರು ಜನರನ್ನು ನೋಡಿದರೆ ಶ್ರೀಗಳ ಸೇವೆ ಎಂತದ್ದು ಎಂದು ತಿಳಿಯುತ್ತದೆ.

ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು, ನಾಯಕರ ಪರವಾಗಿ ಶ್ರೀಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಅವರ ಸಾಮಾಜಿಕ ಸೇವೆಯನ್ನು ಇಡೀ ವಿಶ್ವವೇ ಸ್ಮರಿಸಲಿದೆ. ಕಾಂಗ್ರೆಸ್‌ ಪರವಾಗಿ ಶ್ರೀಗಳಿಗೆ ಭಾರತರತ್ನ ನೀಡುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪರವಾಗಿ ಆಗಮಿಸಿದ್ದ ಪಾಂಡಿಚೆರಿಯ ಮುಖ್ಯಮಂತ್ರಿಯಾದ ಸಿಎಂ ನಾರಾಯಣಸ್ವಾಮಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *