ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿ ಆರೋಗ್ಯದಲ್ಲಿ ಅಲ್ಪ ಏರುಪೇರು: ಸದ್ಯ ಚೇತರಿಕೆ

ತುಮಕೂರು: ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಭಾನುವಾರ ರಾತ್ರಿ ಅಲ್ಪ ಏರುಪೇರಾಗಿದೆ. ಆದರೂ, ಆತಂಕಪಡುವ ಅಗತ್ಯವೇನೂ ಇಲ್ಲ ಎಂದು ಮಠದ ಮೂಲಗಳು ಮತ್ತು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧಗಂಗಾ ಶ್ರೀಗಳ ಪರಿಚಾರಕರಾದ ಬೇವೂರು ಶ್ರೀಗಳು, ಶ್ರೀಗಳ‌ ಆರೋಗ್ಯದಲ್ಲಿ ರಾತ್ರಿ ಸ್ವಲ್ಪ ರಕ್ತದೊತ್ತಡ ಏರುಪೇರಾಗಿತ್ತು. ಈಗ ಸಹಜ ಸ್ಥಿತಿಗೆ ಬಂದಿದೆ. ‌ಎಂದಿನಂತೆ ಬೆಳಗ್ಗೆ ಶಿವಪೂಜೆ‌ ನೆರವೇರಿಸಿದ್ದಾರೆ. ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಿಳಿಸಿದರು.

ಶ್ರೀಗಳ ಆರೈಕೆ ಮಾಡುತ್ತಿರುವ ಡಾ. ಪರಮೇಶ್ವರ್​ ಮಾತನಾಡಿ, ” ರಕ್ತದ ಮಾದರಿ ಮತ್ತು ಇತರ ಪರೀಕ್ಷಾ ಮಾದಿರಗಳುನ್ನು ಲ್ಯಾಬ್​ಗೆ ಕಳುಹಿಸಿದ್ದೇವೆ. ಇನ್ನುಳಿದಂತೆ ಉಸಿರಾಟದ ತೊಂದರೆ ಎಂದಿನಂತೇ ಇದೆ,” ಎಂದು ತಿಳಿಸಿದರು.

ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಇಂದು ಮಠಕ್ಕೆ ತೆರಳಿ ಸ್ವಾಮೀಜಿಗಳನ್ನು ಕಾಣುವ ಸಾಧ್ಯತೆಗಳಿವೆ. ಇದಕ್ಕಾಗಿ ಕೋಲಾರದಲ್ಲಿ ಇಂದು ನಡೆಯಬೇಕಿದ್ದ ಅವರ ಬರ ಪ್ರವಾಸ ಮುಂದೂಡಿಕೆಯಾಗಿದೆ ಎನ್ನಲಾಗಿದೆ.