More

    ಸಿದ್ದಗಂಗಾ ಮಠದ ಅನುದಾನಕ್ಕೆ ಬ್ರೇಕ್ ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಟ

    ತುಮಕೂರು: ಸಿದ್ದಗಂಗಾ ಮಠಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿದ್ದ 10 ಕೋಟಿ ರೂ., ಅನುದಾನಕ್ಕೆ ಕಾಂಗ್ರೆಸ್ ಸರ್ಕಾರ ತಡೆ ನೀಡಿರುವುದು ಈಗ ವಿವಾದದ ಕಿಡಿ ಎಬ್ಬಿಸಿದೆ. ಶ್ರೀಮಠಕ್ಕೆ ಅನುದಾನವನ್ನು ಶಾಶ್ವತವಾಗಿ ತಡೆಹಿಡಿಯುವ ಧಮ್ಮು ಈ ಸರ್ಕಾರಕ್ಕಿಲ್ಲ . ತಡೆ ಹಿಡಿದಿರುವ ಅನುದಾನ ಬಿಡುಗಡೆ ಮಾಡದೇ ಇದ್ದರೆ ಬೀದಿಗಿಳಿದು ಹೋರಾಟ ಮಾಡ್ತೀನಿ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಎಚ್ಚರಿಸಿದರು.


    ನಗರದ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಗ್ರಾಮಾಂತರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ 20 ಕೋ.ರೂ., ಅನುದಾನ ತಡೆಹಿಡಿಯಲಾಗಿದೆ. ಅದರಲ್ಲಿ ಸಿದ್ದಗಂಗಾ ಮಠದ 10 ಕೋಟಿಯೂ ಸೇರಿದೆ. ಜನಗಳಿಂದ ಆರಿಸಿ ಬಂದ ಸರ್ಕಾರ ಇದು, ಯಾಕೆ ಅನುದಾನ ಕೊಡಲ್ಲ ಒಂದು ಕೈ ನೋಡಲಾಗುವುದು. ಭ್ರಷ್ಟಾಚಾರ ಆಗಿದ್ದರೆ ತಡೆಹಿಡಿಯಲಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ತಡೆಹಿಡಿಯಬಾರದು. ಆದರೂ ಮಠದ ಅನುದಾನ ತಡೆ ತೆರವು ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.


    ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದೇ ಜನರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಬಿಜೆಪಿಯನ್ನು ಸೋಲಿಸಲು ಧಮ್ ಇರಲಿಲ್ಲ . ಸುಳ್ಳು ಭರವಸೆ ಕೊಟ್ಟು ಹಿಂದಿನ ಬಾಗಿಲಿನಿಂದ ಚುನಾವಣೆಗೆ ಗೆದ್ದಿದ್ದಾರೆ. ಯಾವುದೇ ಷರತ್ತುವಿಧಿಸಿದೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ನಾನೂ ಕೂಡ ವಿದ್ಯುತ್ ಬಿಲ್ ಕಟ್ಟಲ್ಲ . ನಮ್ಮ ಯಾವ ಕಾರ್ಯಕರ್ತರು ಕರೆಂಟ್ ಬಿಲ್ ಕಟ್ಟಲ್ಲ ಎಂದು ಸವಾಲೆಸದ ಸುರೇಶಗೌಡ, ಮನೆ ಯಜಮಾನಿಗೆ 2 ಸಾವಿರ ರೂಪಾಯಿ ಕೊಡ್ತೀನಿ ಅಂದಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಈಗ ಸೊಸೆಗೆ ಹಣ ಹಾಕಬೇಕೋ ಅತ್ತೆಗೆ ಹಣ ಹಾಕಬೇಕೋ ಅನ್ನುವ ಗೊಂದಲ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.


    ಬಿಜೆಪಿ ಸರ್ಕಾರದ ಎಲ್ಲಾ ಕಾಮಗಾರಿಗಳನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದು ನಿರ್ದಿಷ್ಟವಾಗಿ ಸಿದ್ದಗಂಗಾಮಠದ ಅನುದಾನ ತಡೆಹಿಡಿದಿಲ್ಲ. ಹಣಕಾಸಿನ ಸ್ಥಿತಿಗತಿ ತಿಳಿದುಕೊಂಡು ನಿರ್ಧಾರ ಮಾಡಲು ಈ ರೀತಿ ಆದೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಠಕ್ಕೆ ಏನು ಅನುದಾನ ಬರಬೇಕೋ ಬರುತ್ತೆ.
    ಡಾ.ಜಿ.ಪರಮೇಶ್ವರ
    ಗೃಹ ಸಚಿವ (ತುಮಕೂರಿನಲ್ಲಿ ಹೇಳಿಕೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts