ನೀರಿಗೆ ಕಾನೂನಾತ್ಮಕ ಹೋರಾಟ ಅನಿವಾರ್ಯ

ಮೊಳಕಾಲ್ಮೂರು: ಸಾಮಾಜಿಕ ಸೌಲಭ್ಯ ನೀಡದಿದ್ದರೆ ಕಾನೂನಾತ್ಮಕ ಹೋರಾಟ ಅನಿವಾರ್ಯ ಎಂದು ಸಿದ್ದಯ್ಯನ ಕೋಟೆ ಶ್ರೀಮಠದ ಬಸವಲಿಂಗ ಸ್ವಾಮೀಜಿ ತಿಳಿಸಿದರು.

ಇಲ್ಲಿನ ನುಂಕಪ್ಪ ದೇವಸ್ಥಾನ ಆವರಣದಲ್ಲಿ ನೀರಾವರಿ ಹೋರಾಟ ಸಮಿತಿ ಆಯೋಜಿಸಿದ್ದ ನೀರಾವರಿ ಯೋಜನೆ ಹಾಗೂ ಕುಡಿವ ನೀರು ಪೂರೈಕೆ ಕುರಿತ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ರಾಜಕೀಯ ಮೇಲಾಟದಿಂದ 25 ವರ್ಷಗಳಿಂದ ತಾಲೂಕು ಅಭಿವೃದ್ಧಿಯಿಂದ ವಂಚಿತವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಾಲೂಕಿನ ಜನ ಅನ್ನ, ನೀರಿಗಾಗಿ ಗುಳೆ ಹೋಗುವ ಪರಿಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದರು.

ಬಯಲು ಸೀಮೆಯಲ್ಲಿ ಮಳೆ ನಂಬಿ ಬದುಕುವುದು ಕಷ್ಟ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪಕ್ಷಾತೀತವಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಇದಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.

ನಿವೃತ್ತ ಇಂಜಿನಿಯರ್ ಹಿರೇಹಳ್ಳಿ ದೊಡ್ಡಯ್ಯ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ರಾಜಕೀಯ ಗಾಳಕ್ಕೆ ಸಿಲುಕಿ ನರಳುತ್ತಿದೆ. ಯೋಜನೆ ಸಾಧಕ ಬಾಧಕದ ಸಂಪೂರ್ಣ ಮಾಹಿತಿ ಕಲೆ ಹಾಕದೆ ಜನಪ್ರತಿನಿಧಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯೋಜನೆಯಡಿ ತಾಲೂಕಿನ 21 ಕೆರೆಗೆ ನೀರು ಹರಿಸುವ ಚಿಂತನೆ ಇದೆ. ಎಲ್ಲ ಕೆರೆಗಳ ಭರ್ತಿಗೆ ಕನಿಷ್ಠ 1ಟಿಎಂಸಿ ನೀರು ಅಗತ್ಯ. ಕೇವಲ 0.9 ಟಿಎಂಸಿ ನೀರು ಹರಿಸಿದರೆ ಪ್ರಯೋಜನವಿಲ್ಲ. ಅಂತರ್ಜಲ ವೃದ್ಧಿಗೆ ಹಳ್ಳಗಳಿಗೆ ನೀರು ಹರಿಸಬೇಕು ಎಂದರು.

ಮುಖಂಡರಾದ ಕೆ. ಜಗಳೂರಯ್ಯ, ವೈ.ಡಿ. ಬಸವರಾಜ್, ಐಯಣ್ಣ, ಟಿ. ರೇವಣ್ಣ, ವಕೀಲ ಆರ್.ಎಂ. ಅಶೋಕ, ಡಿ.ಎಂ. ಈಶ್ವರಪ್ಪ, ರೈತ ಸಂಘದ ಬೆಳಗಲ್ ಈಶ್ವರಯ್ಯ, ಬೆಡರಡ್ಡಿಹಳ್ಳಿ ಬಸವರಡ್ಡಿ, ತಿಪ್ಪೇಸ್ವಾಮಿ, ಶಂಕರ್‌ರಡ್ಡಿ. ಚಂದ್ರಶೇಖರ್ ಗೌಡ ಇತರರಿದ್ದರು.