ಸಿದ್ದರಾಮಯ್ಯ ರೀತಿ ಅಹಂಕಾರದಿಂದ ಮೆರೆದು, ಉರಿದಂತಹ ನಾಯಕರು ಎಲ್ಲ ಸ್ಥಾನ ಕಳೆದುಕೊಂಡಿರೋದನ್ನ ಕಂಡಿದ್ದೇವೆ

ದಾವಣಗೆರೆ: ಅಹಿಂದ ಸಮುದಾಯವನ್ನು ಬಳಸಿಕೊಂಡು ರಾಜಕೀಯವಾಗಿ ಮೇಲೇರಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಹಂ ಮತ್ತು ದುರಹಂಕಾರ ಹೆಚ್ಚಾಗಿದೆ. ಈ ಎರಡು ಗುಣಗಳು ಅವರನ್ನು ಎಲ್ಲಿಗೆ ಕರೆದೊಯ್ಯುತ್ತೋ ಗೊತ್ತಿಲ್ಲ. ಇವರಂತೆ ಮೆರೆದು, ಉರಿದಂತಹವರು ಎಲ್ಲ ರೀತಿಯಲ್ಲೂ ಎಲ್ಲ ಸ್ಥಾನಗಳನ್ನು ಕಳೆದುಕೊಂಡಿರುವುದನ್ನು ನೋಡಿದ್ದೇವೆ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಿವಾಜಿನಗರ ಶಾಸಕ ಹಾಗೂ ಕಾಂಗ್ರೆಸ್​ ನಾಯಕ ರೋಷನ್​ ಬೇಗ್​ ಕಾಂಗ್ರೆಸ್​ ಮುಖಂಡರ ವಿರುದ್ಧ ಹರಿಹಾಯ್ದಿರುವ ಕ್ರಮವನ್ನು ಬೆಂಬಲಿಸಿದರು. ರೋಷನ್​ ಬೇಗ್​ ಅವರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ವಿರುದ್ಧ ಆಡಿರುವ ಮಾತುಗಳೆಲ್ಲವೂ ಸತ್ಯವಾಗಿವೆ ಎಂದರು.

ಸಿದ್ದರಾಮಯ್ಯ ಅವರ ರೀತಿ ದುರಹಂಕಾರದಿಂದ ವರ್ತಿಸುವ ನಾಯಕರನ್ನು ನಾವು ಸಾಕಷ್ಟು ನೋಡಿದ್ದೇವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಗ್ಗಿ, ಬಗ್ಗಿ ನಡೆಯಬೇಕು. ಬದುಕಬೇಕು. ಅದು ಬಿಟ್ಟು ನಾನೇ ಎಲ್ಲ ಎಂದು ಮೆರೆದರೆ ಕಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *