More

    ನನಸಾಗದ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಕನಸು!;ವರುಣ ಕ್ಷೇತ್ರಕ್ಕೆ ಸೀಮಿತ, ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯಕ್ಕೆ ದೆಹಲಿ ವರಿಷ್ಠರ ಮನ್ನಣೆ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಕೋಲಾರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲೇ ಬೇಕೆಂಬ ಸಿದ್ದರಾಮಯ್ಯ ಆಸೆ ಕೊನೆಗೂ ಈಡೇರಲಿಲ್ಲ.

    ಮಾಜಿ ಸಿಎಂ ಒತ್ತಡಕ್ಕೆ ಮಣಿಯದ ಕಾಂಗ್ರೆಸ್ ಹೈಕಮಾಂಡ್, ಕೊತ್ತೂರು ಮಂಜುನಾಥ್​ಗೆ ಟಿಕೆಟ್ ನೀಡಿದೆ. ವರುಣ ಕ್ಷೇತ್ರ ಹೊರತುಪಡಿಸಿ, ಯಾವುದೇ ಕಾರಣಕ್ಕೂ ಕೋಲಾರದಿಂದ ಟಿಕೆಟ್ ನೀಡಬಾರದು. ಕೊಟ್ಟಲ್ಲಿ ಅದು ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ರಾಜ್ಯ ಕಾಂಗ್ರೆಸ್​ನ ಇತರೆ ಪ್ರಮುಖ ನಾಯಕರ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ದಿಲ್ಲಿ ನಾಯಕರು, ಸಿದ್ದರಾಮಯ್ಯರನ್ನು ವರುಣ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದಾರೆ. ಕೊತ್ತೂರು ಮಂಜುನಾಥ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಆಪ್ತರು ಎನ್ನುವುದು ಗಮನಾರ್ಹ.

    ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ಮೊದಲ ಸಭೆಯಲ್ಲೇ ರಾಹುಲ್ ಗಾಂಧಿ, ಕೋಲಾರದಿಂದ ಸ್ಪರ್ಧಿಸುವುದು ಬೇಡ ಎಂದು ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದರು. ಇದಾಗಿ, ಬೆಂಗಳೂರಿಗೆ ವಾಪಸಾಗಿದ್ದ ಮೇಲೆ ಸಿದ್ದರಾಮಯ್ಯ ಬೆಂಬಲಿಗರು ನೀವು ಕೋಲಾರದಿಂದ ಸ್ಪರ್ಧಿಸಲೇಬೇಕೆಂದು ಒತ್ತಾಯಿಸಿದ್ದರು. ಮೇಲಾಗಿ, ತಾವು ಬಯಸಿದ್ದ ಕೋಲಾರ ಟಿಕೆಟ್ ಪಡೆಯದಿದ್ದರೆ ಪಕ್ಷದಲ್ಲಿರುವ ವಿರೋಧಿ ಗುಂಪು ಮೇಲುಗೈ ಸಾಧಿಸಿದಂತಾಗುತ್ತದೆ ಎನ್ನುವುದು ಸಿದ್ದರಾಮಯ್ಯರ ಆಪ್ತ ಪಾಳಯದ ಚಿಂತೆಯಾಗಿತ್ತು. ಹೀಗಾಗಿ, ಮೂರನೇ ಚುನಾವಣಾ ಸಮಿತಿ ಸಭೆಗೆಂದು ದೆಹಲಿಗೆ ಬಂದಿದ್ದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಜತೆ ಪ್ರತ್ಯೇಕ ಸಭೆ ನಡೆಸಿದ್ದ ಸಿದ್ದರಾಮಯ್ಯ ಮತ್ತೊಮ್ಮೆ ಕೋಲಾರದ ಪ್ರಸ್ತಾಪ ಮಾಡಿದ್ದರು. ಅದಾಗಿ, ಮಾರನೇ ದಿನವೂ ರಾಹುಲ್ ನಿವಾಸಕ್ಕೆ ತೆರಳಿ, ಕೋಲಾರದಿಂದ ತಾವು ಸ್ಪರ್ಧಿಸಿದರೆ ಆ ಕ್ಷೇತ್ರದ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳನ್ನೂ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ರಾಹುಲ್​ಗೆ ಇದು ಸಮಾಧಾನ ತಂದಿರಲಿಲ್ಲ. ಪಕ್ಷದ ಇತರೆ ನಾಯಕರು ಯಾರೂ ಒಪ್ಪುತ್ತಿಲ್ಲ. ಅವರೆಲ್ಲರ ವಿರೋಧ ಕಟ್ಟಿಕೊಂಡು ಹೇಗೆ ಟಿಕೆಟ್ ನೀಡಲಿ ಎಂದು ರಾಹುಲ್ ಪ್ರಶ್ನಿಸಿದ್ದರೆನ್ನಲಾಗಿದೆ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿದ್ದ ಸಿದ್ದರಾಮಯ್ಯರ ಆಪ್ತಮಿತ್ರರೊಬ್ಬರನ್ನು ಬಿಟ್ಟರೆ ಉಳಿದವೆಲ್ಲರೂ 2018ರ ಪುನರಾವರ್ತನೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟ ಅಭಿಪ್ರಾಯ ಹೊರಹಾಕಿದ್ದರು.

    ನಾ ಸ್ಪರ್ಧಿಸಲ್ಲ ಎಂದಿದ್ದರು!: ಕೇಂದ್ರ ಚುನಾವಣೆ ಸಮಿತಿಯ ಮೊದಲ ಸಭೆ ಮುಗಿದ ಬಳಿಕ ಕೋಲಾರದಿಂದ ಹಿಂದೆ ಸರಿಯುವುದು ಸಿದ್ದರಾಮಯ್ಯರ ನಿರ್ಧಾರವೇ ಆಗಿತ್ತು. ಸಿದ್ದರಾಮಯ್ಯ ಆಪ್ತಗುಂಪು ನಡೆಸಿದ ಸಮೀಕ್ಷೆಯೂ ಭರವಸೆದಾಯಕವಾಗಿಲ್ಲ ಎಂದು ದಿಲ್ಲಿಯಲ್ಲಿ ಸಿಕ್ಕ ಕಾಂಗ್ರೆಸ್ ಹಿರಿಯ ನಾಯಕರು ಅನೌಪಚಾರಿಕವಾಗಿ ಮಾತನಾಡುತ್ತಾ ಹೇಳಿದ್ದರು. ಸಭೆಯ ಮಾರನೇ ದಿನ ಬೆಳಗ್ಗೆ ದಿಲ್ಲಿ ಕರ್ನಾಟಕ ಭವನದಲ್ಲಿ ಎದುರುಗೊಂಡಿದ್ದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪರಲ್ಲಿ, ನಾನು ಕೋಲಾರದಿಂದ ಸ್ಪರ್ಧೆ ಮಾಡುತ್ತಿಲ್ಲ. ವರಿಷ್ಠರು ಸ್ಪರ್ಧೆ ಮಾಡೋದು ಬೇಡ ಎಂದಿದ್ದಾರೆ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದರು. ಇದರಿಂದ ಅಚ್ಚರಿಗೊಂಡಿದ್ದ ಮುನಿಯಪ್ಪ, ತಾವು ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದರು. ರಾಜ್ಯಕ್ಕೆ ವಾಪಸಾದ ಮೇಲೆ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಬೆಂಬಲಿಗರಿಗೆ ಬೇಸರ ಉಂಟು ಮಾಡುವುದು ಬೇಡ ಎಂಬ ಕಾರಣಕ್ಕಾಗಿ ಮತ್ತೆ ದಿಲ್ಲಿ ನಾಯಕರನ್ನು ಸಂರ್ಪಸಿದರು. ಆದರೆ, ವರಿಷ್ಠರು ಇದಕ್ಕೆ ಸೊಪ್ಪು ಹಾಕಲಿಲ್ಲ.

    ಸೋಮಣ್ಣ ಬಂದಿದ್ದರಿಂದ ಅನಿವಾರ್ಯವಾಯ್ತು: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯರಿಗೆ ತೀಕ್ಷ್ಣ ಸವಾಲು ನೀಡಬೇಕೆಂದೇ ಪ್ಲಾನ್ ಮಾಡಿರುವ ಬಿಜೆಪಿ, ವಸತಿ ಸಚಿವ ವಿ. ಸೋಮಣ್ಣಗೆ ಟಿಕೆಟ್ ನೀಡಿದೆ. ಹೀಗಾಗಿ ಈ ಕ್ಷೇತ್ರ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸೋಮಣ್ಣ ಬಂದಿರುವುದರಿಂದ ಸಿದ್ದರಾಮಯ್ಯ ಹೆಚ್ಚುವರಿ ಪರಿಶ್ರಮ ಹಾಕಲೇಬೇಕಾಗುತ್ತದೆ. ಹೀಗಿರುವಾಗ, ಕೋಲಾರ ಟಿಕೆಟ್​ನ್ನೂ ನೀಡಿದರೆ ಅವರು ಕೇವಲ 2 ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದೆಡೆ ಪ್ರಚಾರ ನಡೆಸುವುದು ಕಷ್ಟವಾಗಲಿದೆ. ಇದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುವುದು ಹೈಕಮಾಂಡ್ ಅರಿವಿಗೂ ಬಂದಿತ್ತು.

    ಕಾಂಗ್ರೆಸ್ ಫ್ಲೆಕ್ಸ್ ಹರಿದು ಪ್ರತಿಭಟನೆ

    ಮದ್ದೂರು: ಕೆಪಿಸಿಸಿ ಸದಸ್ಯ ಗುರುಚರಣ್​ಗೆ ಟಿಕೆಟ್ ನೀಡದಿರುವುದನ್ನು ಖಂಡಿಸಿ ಕಾರ್ಯಕರ್ತರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿದ್ದ ಪಕ್ಷದ ಫೆಕ್ಸ್​ಗಳನ್ನು ಹರಿದು ಹಾಕಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು, ಬೆಂಕಿ ಹಾಕಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಡಿ.ಕೆ.ಶಿವಕುಮಾರ್ ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.

    ಮೂರನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು

    ಅಥಣಿ: ಲಕ್ಷ್ಮಣ ಸವದಿ; ರಾಯಭಾಗ: ಮಹಾವೀರ್ ಮೊಹಿತ್; ಅರಭಾವಿ: ಅರವಿಂದ ದಳವಾಯಿ; ಬೆಳಗಾವಿ ಉತ್ತರ: ಆಸಿಫ್ ಸೇಠ್; ಬೆಳಗಾವಿ ದಕ್ಷಿಣ: ಪ್ರಭಾವತಿ ಮಾಸ್ತ್​ಮರ್ಡಿ; ತೇರದಾಳ: ಸಿದ್ದಪ್ಪರಾಮಪ್ಪ ಕೊನ್ನೂರು; ದೇವರ ಹಿಪ್ಪರಗಿ: ಶರಣಪ್ಪ ಟಿ. ಸುಣಗಾರ; ಸಿಂಧಗಿ: ಅಶೋಕ್ ಎಂ. ಮನಗೂಳಿ; ಕಲಬುರಗಿ ಗ್ರಾಮೀಣ: ರೇವು ನಾಯ್್ಕ ಬೆಳಮಗಿ; ಔರಾದ್: ಡಾ. ಶಿಂಧೆ ಭೀಮಸೇನರಾವ್; ಮಾನ್ವಿ: ಜಿ. ಹಂಪ್ಪಯ್ಯ ನಾಯ್್ಕ; ದೇವದುರ್ಗ: ಶ್ರೀದೇವಿ ಆರ್. ನಾಯಕ್; ಸಿಂಧನೂರು: ಹಂಪನಗೌಡ ಬಾರ್ದಲಿ; ಶಿರಹಟ್ಟಿ: ಸುಜಾತ ಎನ್. ದೊಡ್ಡಮನಿ; ನವಲಗುಂದ: ಎನ್.ಎಚ್. ಕೋನರೆಡ್ಡಿ; ಕುಂದಗೋಳ: ಕುಸುಮಾವತಿ ಸಿ. ಶಿವಳ್ಳಿ; ಕುಮಟಾ: ನಿವೇದಿತ್ ಆಳ್ವ; ಸಿರಗುಪ್ಪ: ಬಿ.ಎಂ. ನಾಗರಾಜ್; ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ; ಜಗಳೂರು: ಬಿ. ದೇವೇಂದ್ರಪ್ಪ; ಹರಪ್ಪನಹಳ್ಳಿ: ಎನ್. ಕೋಟ್ರೇಶ್; ಹೊನ್ನಾಳಿ: ಡಿ.ಜಿ. ಶಾಂತನಗೌಡ; ಶಿವಮೊಗ್ಗ ಗ್ರಾಮೀಣ: ಡಾ. ಶ್ರೀನಿವಾಸ ಕರಿಯಣ್ಣ; ಶಿವಮೊಗ್ಗ: ಎಚ್.ಸಿ. ಯೋಗೇಶ್; ಶಿಕಾರಿಪುರ: ಜಿ.ಬಿ. ಮಾಲತೇಶ್; ಕಾರ್ಕಳ: ಉದಯ್ ಶೆಟ್ಟಿ; ಮೂಡಿಗೆರೆ: ನಯನಾ ಜ್ಯೋತಿ ಜಾವರ್; ತರೀಕೆರೆ: ಜಿ.ಎಚ್. ಶ್ರೀನಿವಾಸ್; ತುಮಕೂರು ಗ್ರಾಮೀಣ: ಜಿ.ಎಚ್. ಷಣ್ಮುಖಪ್ಪ ಯಾದವ್; ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್ ‘ಪಿಇ’; ಕೋಲಾರ: ಕೊತ್ತೂರ್ ಜಿ. ಮಂಜುನಾಥ್ ದಾಸರಹಳ್ಳಿ: ಧನಂಜಯ ಗಂಗಾಧರಯ್ಯ; ಚಿಕ್ಕಪೇಟೆ: ಆರ್.ವಿ. ದೇವರಾಜ್, ಬೊಮ್ಮನಹಳ್ಳಿ: ಉಮಾಪತಿ ಶ್ರೀನಿವಾಸ ಗೌಡ, ಬೆಂಗಳೂರು ದಕ್ಷಿಣ: ಆರ್.ಕೆ. ರಮೇಶ್, ಚನ್ನಪಟ್ಟಣ: ಗಂಗಾಧರ್ ಎಸ್; ಮದ್ದೂರು: ಉದಯ್ ಕೆ.ಎಂ.; ಅರಸೀಕೆರೆ: ಕೆ.ಎಂ. ಶಿವಲಿಂಗೇಗೌಡ; ಹಾಸನ: ಬನವಾಸಿ ರಂಗಸ್ವಾಮಿ; ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ,ಪುತ್ತೂರು: ಅಶೋಕ್ ಕುಮಾರ್ ರೈ, ಕೃಷ್ಣರಾಜ: ಎಂ.ಕೆ. ಸೋಮಶೇಖರ್, ಚಾಮರಾಜ: ಕೆ. ಹರೀಶ್​ಗೌಡ.

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts