ಹಾಸನ ಬಿಕ್ಕಟ್ಟಿಗೆ ಸಿದ್ದು ತೇಪೆ

ಬೆಂಗಳೂರು: ಮೈತ್ರಿ ಅಭ್ಯರ್ಥಿ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿರುವ ಹಾಸನ ಕಾಂಗ್ರೆಸಿಗರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಹಂತದಲ್ಲಿ ಸಫಲರಾಗಿದ್ದಾರೆ.

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ತಂದೆಯೂ ಆಗಿರುವ ಎಚ್.ಡಿ.ರೇವಣ್ಣರನ್ನು ಮನೆಗೆ ಕರೆಸಿಕೊಂಡಿದ್ದ ಸಿದ್ದರಾಮಯ್ಯ, ಎಲ್ಲರನ್ನೂ ಅನುಸರಿಸಿಕೊಂಡು ಹೋಗುವಂತೆ ಬುದ್ಧಿಮಾತು ಹೇಳಿದ್ದಾರೆ.

ಹಾಸನದಿಂದಲೂ 20ಕ್ಕೂ ಹೆಚ್ಚು ಪ್ರಮುಖ ನಾಯಕರು ಈ ವೇಳೆ ಆಗಮಿಸಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ್, ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಪಂ ಸದಸ್ಯರು ಹಾಜರಿದ್ದರು. ಕಾರ್ಯಕರ್ತರ ಮೇಲೆ ಕೇಸು ಹಾಕಿಸುವುದನ್ನು ಬಿಡಬೇಕು, ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು, ಟೆಂಡರ್​ಗಳಲ್ಲಿ ಅವಕಾಶ ಕೊಡಿಸಬೇಕು, ಸರ್ಕಾರಿ ನೇಮಕಗಳಲ್ಲಿ ಆದ್ಯತೆ ಸಿಗಬೇಕೆಂಬುದು ನಮ್ಮ ಕಾರ್ಯಕರ್ತರ ಒತ್ತಾಯ. ಇದನ್ನು ಗಮನಿಸಬೇಕೆಂದು ರೇವಣ್ಣಗೆ ಸಲಹೆ ನೀಡಿದ್ದಾರೆನ್ನಲಾಗಿದೆ. ರೇವಣ್ಣ ಸಹ ಎಲ್ಲ ಬೇಡಿಕೆಗಳಿಗೆ ತಲೆಯಾಡಿಸಿ ತೆರಳಿದ್ದಾರೆ.