ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ: ಸಿದ್ದರಾಮಯ್ಯ

ಬೆಂಗಳೂರು: ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನನ್ನನ್ನು ಪ್ರಶ್ನಿಸಿದ ಮಹಿಳೆಯನ್ನು ನಾನು 15 ವರ್ಷದಿಂದ ಬಲ್ಲೆ. ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ವರುಣ ಕ್ಷೇತ್ರದಲ್ಲಿ ಇಂದು ಸಿದ್ದರಾಮಯ್ಯ ಅವರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಅವರ ಕೈಯಿಂದ ಮೈಕ್​ ಕಿತ್ತುಕೊಂಡಿದ್ದರು. ಇವರ ಈ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಪತ್ರ ಬರೆಯುವುದಾಗಿ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು ‘ಇಂದು ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ‌ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ‌ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ.’ ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಬಿಜೆಪಿ ನಾಯಕರು ಈ ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣು ಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಂದ ನಾನು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಬೇಕಿಲ್ಲ ಎಂದು ಕಿಡಿ ಕಾರಿದ್ದಾರೆ.