ಶಿವಮೊಗ್ಗ:ಕಾಯಕ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೂಲಕ ಮನುಕುಲದ ಕಣ್ತೆರಿಸಿದ ಮಹನೀಯ ಶಿವಯೋಗಿ ಸಿದ್ದರಾಮೇಶ್ವರರು. ಅವರು ಒಂದು ಸಮುದಾಯ ಅಥವಾ ಜಾತಿಗೆ ಸೀಮಿತರಾದವರಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಸಾಧಕ ಸಿದ್ದರಾಮೇಶ್ವರರನ್ನು ಭೋವಿ ಮತ್ತು ವೀರಶೈವ ಸಮಾಜದವರು ಭಕ್ತಿಯ ಭಾವದಿಂದ ಕಾಣುತ್ತಾರೆ ಎಂದರು.
ಪ್ರಕೃತಿಯ ಮೇಲೆ ಪ್ರತಿ ಬಾರಿ ದಾಳಿಯಾದಾಗಲೂ ಅದಕ್ಕೆ ಸೂಕ್ತ ದಂಡ ತೆರಬೇಕಾಗುತ್ತದೆ ಎಂದು ಶಿವಯೋಗಿ ಸಿದ್ದರಾಮೇಶ್ವರರು ಆಗಿನ ಕಾಲದಲ್ಲೇ ಎಚ್ಚರಿಸಿದ್ದರು. ಅವರು ತಮ್ಮ ಕಾಯಕ ನಿಷ್ಠೆ ಜತೆಗೆ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಕೆರೆ, ಕಟ್ಟೆ, ಕಾಲುವೆಗಳನ್ನು ನಿರ್ಮಿಸಿದ್ದರು. ಕಾಯಕದಲ್ಲಿ ಶಿವನನ್ನು ಕಾಣುವ ಪ್ರಯತ್ನ ಮಾಡಿ ಸಫಲರಾದರು ಎಂದು ಹೇಳಿದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ವಿವಿಧ ಕಾರಣಗಳಿಂದಾಗಿ ಅಸಂಘಟಿತರಾಗಿರುವ ಭೋವಿ ಸಮಾಜದವರು ಶ್ರೀ ಸಿದ್ದರಾಮೇಶ್ವರ ಜಯಂತಿ ನೆಪದಲ್ಲಾದರೂ ಸಮನ್ವಯ ಕಾಯ್ದುಕೊಳ್ಳಬೇಕು, ಒಗ್ಗಟ್ಟಾಗಿರಬೇಕು. ಸಿದ್ದರಾಮೇಶ್ವರರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ, ಶ್ರಮಿಕ ಸಮುದಾಯದಿಂದ ಬಂದ ಶ್ರೀ ಸಿದ್ದರಾಮರು ತಮ್ಮ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರು. ಮಂತ್ರ ಪೂಜೆಗಳನ್ನು ಹೊರತುಪಡಿಸಿ ಕಾಯಕದ ಮೂಲಕ ಶಿವನ ದರ್ಶನ ಮಾಡಿದ ಸಿದ್ದರಾಮೇಶ್ವರರು ಸಜ್ಜನರ ಸಂಘದಿಂದ ಜ್ಞಾನಾರ್ಜನೆ ಹೊಂದಿದರು. ಸತತವಾಗಿ ಕೆರೆಕಟ್ಟೆ, ಕಾಲುವೆಗಳ ನಿರ್ಮಾಣದ ಮೂಲಕ ಶಿವನನ್ನು ಆರಾಧಿಸಿದರು ಎಂದು ವಿವರಿಸಿದರು.
ನಿಷ್ಕಾಮ ಮನಸ್ಥಿತಿಯ ಸಿದ್ದರಾಮರ ಬದುಕು, ಜೀವನ ಹಾಗೂ ಕಾರ್ಯಶೈಲಿ ಮಾದರಿಯಾಗಿದೆ. ಯುವಜನತೆ ಸಂಘಟಿತರಾಗಬೇಕು. ಸಿದ್ದರಾಮೇಶ್ವರರ ಜೀವನ ಪಾಲಿಸಬೇಕು. ಪಾಲಕರು ಸಕಾಲದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಕುಟುಂಬದ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗಿಸಬೇಕು ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿ ಬಲ್ಕಿಷ್ ಬಾನು, ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಎಸ್ಪಿ ಕಾರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇತರರಿದ್ದರು.