ಕಾಂಗ್ರೆಸ್​, ಜೆಡಿಎಸ್​ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಬಹಳ ಜನರಿದ್ದು ಅವರಲ್ಲಿ ರೇವಣ್ಣ ಕೂಡಾ ಒಬ್ಬರು!

ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಅವರು ಇತ್ತೀಚಿಗೆ ನೀಡುತ್ತಿರುವ ಹೇಳಿಕೆಗಳಿಂದ ಪದೇಪದೆ ಸಾಬೀತಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಇತ್ತೀಚೆಗೆ ವಾಗ್ಸಮರ ನಡೆಸಿ ಸುದ್ದಿಯಾಗಿದ್ದರು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದಲೂ ಸಿದ್ದರಾಮಯ್ಯ ಸರಣಿ ಟ್ವೀಟ್​ಗಳ ಮೂಲಕ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈಗ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಯೊಂದನ್ನು ಇಟ್ಟುಕೊಂಡು ಟ್ವೀಟ್​ ಮಾಡಿದ್ದಾರೆ. ಅದರಲ್ಲಿ ಅವರು ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ, ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಅದರಂತೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯುಳ್ಳ ಬಹಳಷ್ಟು ಜನರಿದ್ದಾರೆ. ಅವರಲ್ಲಿ ಎಚ್​.ಡಿ. ರೇವಣ್ಣ ಕೂಡಾ ಒಬ್ಬರು. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು ಹೈದ್ರಾಬಾದ್ ಕರ್ನಾಟಕ ಭಾಗದ ಜನತೆಯ ಪರವಾಗಿ ಪ್ರಾಮಾಣಿಕ ಕೊಡುಗೆ ಕೊಟ್ಟ ಖರ್ಗೆ ಅವರನ್ನು ಟೀಕಿಸಲಾಗುತ್ತಿದೆ. ಮೈತ್ರಿ ಸರ್ಕಾರ ರಚನೆ ಮಾಡಿರುವುದು ಸ್ವಾರ್ಥಕ್ಕೆ ಅಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಖರ್ಗೆಯವರೇ ಆಗಬಹುದಾಗಿತ್ತು. ಆದರೆ ಹೈಕಮಾಂಡ್ ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದಿದ್ದಾರೆ. ಖರ್ಗೆ ‌ಈ ರಾಜ್ಯದ ಮುಖ್ಯಮಂತ್ರಿ ಎಂದೋ ಆಗಬೇಕಾಗಿತ್ತು ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆ ಬಂದಾಗ ದಲಿತ ಸಿಎಂ ಹೇಳಿಕೆ ಬರುತ್ತದೆ. ನಂತರ ಅದನ್ನು ಮರೆತು ಬಿಡುತ್ತಾರೆ. ಪದೇಪದೆ ದಲಿತ ಸಿಎಂ ಹೇಳಿಕೆ ನೀಡಿ ನನಗೆ, ನನ್ನ ಸಮುದಾಯಕ್ಕೆ ಅವಮಾನ ಮಾಡಬೇಡಿ. ಕಾರ್ಯಕ್ಷಮತೆ ದೃಷ್ಟಿಯಿಂದಲೂ ತಾವು ಸಿಎಂ ಹುದ್ದೆಗೆ ಸಮರ್ಥರು ಎಂದು ತಿಳಿಸಿದ್ದರು.

One Reply to “ಕಾಂಗ್ರೆಸ್​, ಜೆಡಿಎಸ್​ನಲ್ಲಿ ಸಿಎಂ ಸ್ಥಾನದ ಅರ್ಹತೆ ಉಳ್ಳವರು ಬಹಳ ಜನರಿದ್ದು ಅವರಲ್ಲಿ ರೇವಣ್ಣ ಕೂಡಾ ಒಬ್ಬರು!”

  1. ಹೌದು ಈ ಬಾರಿ ಶ್ರೀ ರೇವಣ್ಣ ಅವರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡಬೇಕಿತ್ತು. ಅವಾಗ ಭಿನ್ನಮತ ಸ್ವರ ಬರುತಿರಲ್ಲಿಲ್ಲ.

Comments are closed.