ಬಾದಾಮಿಗೆ ಮಾತ್ರ ಬೆಣ್ಣೆ!

ಬೆಂಗಳೂರು: ನಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಒಂದೇ ಇಲಾಖೆಯಿಂದ 65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದು ಮೈತ್ರಿ ಪಕ್ಷಗಳ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದ 224ರಲ್ಲಿ ಯಾವುದೇ ಕ್ಷೇತ್ರಕ್ಕೂ ಇಷ್ಟು ಪ್ರಮಾಣದ ಅನುದಾನ ಬಿಡುಗಡೆಯಾಗಿಲ್ಲ. ಎಲ್ಲ ಕ್ಷೇತ್ರಗಳಿಗೂ ಇದೇ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲು ಮುಂದಾದರೆ ದೊಡ್ಡ ಮೊತ್ತವೇ ಬೇಕಾಗುತ್ತದೆ. ಯಾವುದೇ ಕ್ಷೇತ್ರಕ್ಕೂ ತೋರಿಸದ ವಿಶೇಷ ಪ್ರೀತಿಯನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಾದಾಮಿಗೆ ತೋರಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಸದ್ದಿಲ್ಲದೆ ಬಿಡುಗಡೆ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಜುಲೈನಲ್ಲಿ ಪತ್ರ ಬರೆದಿದ್ದರು. ಆಗ ಸಿಎಂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಸಚಿವ ರೇವಣ್ಣ ಸದ್ದಿಲ್ಲದೆ ಹಣ ಬಿಡುಗಡೆ ಮಾಡಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ 1,791 ಕೋಟಿ ರೂ.ಗಳನ್ನು ರಾಜ್ಯದ 200ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗೆ ಬಾಕಿ ಕೊಡಬೇಕಾಗಿತ್ತು. 2018-19ನೇ ಆರ್ಥಿಕ ವರ್ಷದಲ್ಲಿ ಈ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆಯಾದರೂ ಯಾವ ಕ್ಷೇತ್ರಕ್ಕೂ ಈತನಕ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಕಾಮಗಾರಿ ಮುಗಿದರೂ ಸರ್ಕಾರ ಹಣ ಕೊಡುತ್ತಿಲ್ಲ ಎಂದು ಹಾಲಿ ಹಾಗೂ ಮಾಜಿ ಶಾಸಕರು ಪರಿತಪಿಸುತ್ತಿದ್ದಾರೆ.

ಹಳೇ ಬಾಕಿ ಕೊಡಲು ಸಾಧ್ಯವಾಗದೆ ಆರ್ಥಿಕ ಮಿತವ್ಯಯದ ಕಾರಣ ನೀಡಿ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಕುಮಾರಸ್ವಾಮಿ ಮಂಡಿಸಿದ ಬಜೆಟ್​ನಲ್ಲೂ ಬೆರಳೆಣಿಕೆಯ ಹೊಸ ರಸ್ತೆಗಳ ಅಭಿವೃದ್ಧಿ ಯೋಜನೆ ಮಾತ್ರ ಪ್ರಕಟಿಸಲಾಗಿದೆ. ಈ ಮಧ್ಯೆ ಆಗಸ್ಟ್ ಅಂತ್ಯಕ್ಕೆ ಕಾಂಗ್ರೆಸ್​ನ 17ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿ ಹರಡಿತ್ತು. ಆ ವೇಳೆ ಯುರೋಪ್ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ಅಲ್ಲಿಂದ ವಾಪಸ್ ಆಗುತ್ತಿದ್ದಂತೆ ಎಲ್ಲ ಅತೃಪ್ತ ಶಾಸಕರನ್ನು ಕರೆದು ಸಮಾಧಾನಪಡಿಸಲು ಪ್ರಯತ್ನಿಸಿದರು. ಇದರ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ‘ಸಿದ್ದರಾಮಯ್ಯನವರೇ ಐದು ವರ್ಷ ಸರ್ಕಾರ ಇರುತ್ತದೆ’ ಎಂದು ಹೇಳಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಬಹಿರಂಗವಾಗಿಯೇ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ನೀಡದ ರಾಜ್ಯ ಸರ್ಕಾರ, ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ಮಾತ್ರ 65 ಕೋಟಿ ರೂ. ವಿಶೇಷ ಅನುದಾನ ನೀಡಿರುವುದು ಅಚ್ಚರಿ ಮೂಡಿಸಿದೆ.

ರಾಹು-ಕೇತು, ಶನಿ ಜೆಡಿಎಸ್

ಬೆಂಗಳೂರು: ರಾಹು-ಕೇತು, ಶನಿ ಸೇರಿ ಸೋಲಿಸಿದರು ಎಂಬ ಸಿದ್ದರಾಮಯ್ಯ ಹೇಳಿಕೆ ಜೆಡಿಎಸ್​ನವರನ್ನು ಕುರಿತೇ ಹೊರತು ಬಿಜೆಪಿಯನ್ನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಜೆಡಿಎಸ್-ಕಾಂಗ್ರೆಸ್ ರಾಹು-ಕೇತು, ಶನಿಗಳು. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರನ್ನು ನಿಲ್ಲಿಸಿ, ಷಡ್ಯಂತ್ರ ಮಾಡಿ ಸಿದ್ದರಾಮಯ್ಯರನ್ನು ಸೋಲಿಸುವ ಮೂಲಕ ಅವರ ಸಮುದಾಯಕ್ಕೆ ಜೆಡಿಎಸ್ ಅವಮಾನ ಮಾಡಿದೆ. ಇಷ್ಟೆಲ್ಲ ನೋವನ್ನು ಸಹಿಸಿಕೊಂಡು ಸಿದ್ದರಾಮಯ್ಯ ಇನ್ನೂ ಅಲ್ಲಿ ಹೇಗಿದ್ದಾರೆ ಎಂಬುದೇ ಆಶ್ಚರ್ಯ. ಅವರು ಎಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಕಾಲ ಬಂದಾಗ ಸೂಕ್ತವಾಗಿ ಉತ್ತರ ನೀಡಲಿದ್ದಾರೆ ಎಂದರು.

ಹೆಬ್ಬಾಳ್ಕರ್ ಮಾಹಿತಿ ಬಹಿರಂಗ ಮಾಡಲಿ: 30 ಕೋಟಿ ರೂ. ಆಮಿಷ ಒಡ್ಡಲಾಗಿತ್ತೆಂಬ ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್​ವೈ, ಹೆಬ್ಬಾಳ್ಕರ್ ಬಗ್ಗೆ ಗೌರವವಿದೆ. ಯಾರು ಅವರಿಗೆ ಆಮಿಷ ಒಡ್ಡಿದ್ದರೆಂದು ಹೇಳಿದರೆ ಅವರಿಗೇ ಗೌರವ ಬರುತ್ತದೆ. ಅವರು ದೊಡ್ಡವರಾಗಲು ಬೇರೆಯವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಿಸಿತುಪ್ಪದ ಹೇಳಿಕೆಗೆ ಪ್ರತಿಕ್ರಿಯಿಸಲ್ಲ

ಬೆಂಗಳೂರು: ಸಿದ್ದರಾಮಯ್ಯ ಅವರ ರಾಹು-ಕೇತು ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧ ಮುಂಭಾಗದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದ ಮಾತನಾಡಿದ ಸಿಎಂ, ಅವರು ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದಾರೆಂಬುದು ಗೊತ್ತಿಲ್ಲ ಎಂದು ಜಾರಿಕೊಂಡರು. ಕಳೆದ 3-4 ತಿಂಗಳಿನಿಂದ ಸಮ್ಮಿಶ್ರ ಸರ್ಕಾರದಲ್ಲಿ ಹಲವಾರು ಬಾರಿ ಬಿಸಿತುಪ್ಪದ ರುಚಿ ನೋಡುವ ಸ್ಥಿತಿ ನನಗೆ ಬಂದಿದೆ. ಅಂತಹ ಬಿಸಿತುಪ್ಪವನ್ನು ಮಾಧ್ಯಮಗಳೇ ತಂದಿಟ್ಟಿವೆ. ಈಗ ಮತ್ತೊಂದು ಬಿಸಿತುಪ್ಪದ ವಿಚಾರ ಪ್ರಸ್ತಾಪ ಮಾಡಿದ್ದೀರಿ ಎಂದು ಮಾಧ್ಯಮಗಳಿಗೆ ಟಾಂಗ್ ನೀಡಿದರು.

ನಾನು ಪಂಚಮಸಾಲಿ ಸಮಾಜದ ದಿಟ್ಟ ಹೆಣ್ಣು ಮಗಳು. ನಾನಾಗಿ ಯಾರ ತಂಟೆಗೂ ಹೋಗಲ್ಲ. ನನ್ನ ತಂಟೆಗೆ ಬಂದರೆ ಸುಮ್ಮನಿರುವುದೂ ಇಲ್ಲ. ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹ ಬೆಳಗಾವಿಯವರು. ಹೆಣ್ಣು-ಗಂಡು ಸಮಾನವಾಗಿ ಬೆಳೆಸಿದ ನೆಲ ಅದು.

| ಲಕ್ಷ್ಮೀ ಹೆಬ್ಬಾಳ್ಕರ್

ಶಿಕ್ಷಣ, ಆರೋಗ್ಯ ಉಚಿತವಿದ್ದರೆ ಆಸ್ತಿ ಮಾಡಲ್ಲ!

ಮೈಸೂರು: ಪಾಶ್ಚಿಮಾತ್ಯ ದೇಶಗಳಂತೆ ನಮ್ಮಲ್ಲಿ ಉಚಿತ ಆರೋಗ್ಯ ಮತ್ತು ಶಿಕ್ಷಣ ಸೇವೆ ಇಲ್ಲ. ಈ ಅಭದ್ರತೆಯಿಂದಲೇ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಆಸ್ತಿ ಮಾಡುವ ಕೆಟ್ಟ ಪ್ರವೃತ್ತಿ ಹೆಚ್ಚಾಗಿದೆ. ಈ ಮೂಲಕ ಅವಲಂಬಿತರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ವಿದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೇವೆ ಉಚಿತವಾಗಿರುವುದರಿಂದ ಹಣ ಕೂಡಿಡುವುದಕ್ಕಿಂತ ಅದನ್ನು ಖರ್ಚು ಮಾಡಲು ಇಷ್ಟಪಡುತ್ತಾರೆ. ವಿದೇಶ ಪ್ರವಾಸ ಸಂದರ್ಭ ನನಗಿದು ಮನವರಿಕೆಯಾಗಿದೆ. ಆದರೆ, ನಮ್ಮ ದೇಶದ ಚಿತ್ರಣ ಇದಕ್ಕೆ ವ್ಯತಿರಿಕ್ತ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕೊಡಬೇಕು. ಇದುವೇ ದೇಶದ ಸಂಪತ್ತು. ಆಗ ದೇಶದ ಜಿಡಿಪಿ ಹೆಚ್ಚಾಗಲಿದೆ. 30-40 ವಯಸ್ಸಿನಲ್ಲಿ ಮೃತಪಟ್ಟರೆ ಅದು ದೇಶಕ್ಕೆ ನಷ್ಟ ಎಂದ ನಾಜಿ ಸಿಎಂ, ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ವಿಲೀನಕ್ಕೆ ಅಸಮಾಧಾನ: ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಅದಕ್ಕಾಗಿ ನನ್ನ ಅಧಿಕಾರ ಅವಧಿಯಲ್ಲಿ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿಗೆ ತಂದಿದ್ದೆ. ಅದನ್ನು ಕೇಂದ್ರ ಸರ್ಕಾರದ ‘ಆಯುಷ್ಮಾನ್’ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಇದರಿಂದ ಬಡವರಿಗೆ ಉಪ ಯೋಗವಾಗುವಂತೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಾನೇ ಟ್ರಬಲ್ ಶೂಟರ್. ಹೀಗಾಗಿ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದ್ದು, ರಾಜ್ಯ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ರೈತರ ಸಾಲಮನ್ನಾ ಮಾಡಿರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ಒಂದು ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದೆ

ನಾನು ವಿದ್ಯಾರ್ಥಿ ಮತ್ತು ಲಾಯರ್ ಆಗಿದ್ದಾಗ ದಿನಕ್ಕೆ 40 ಸಿಗರೇಟು ಸೇದುತ್ತಿದ್ದೆ. ವಿದೇಶದಿಂದ ಸ್ನೇಹಿತರು ತಂದುಕೊಟ್ಟ ಸಿಗರೇಟ್ ಬಾಕ್ಸ್ ಗಳನ್ನು ಸೇದಿ ಖಾಲಿ ಮಾಡಿದೆ. ಒಂದು ರಾತ್ರಿ ಮಲಗಿದಾಗ, ಇಷ್ಟು ಸಿಗರೇಟ್ ಸೇದಿದರೆ ನಾನು ಬದುಕಲ್ಲ ಎಂಬುದು ಅರಿವಾಯಿತು. 1987 ಆಗಸ್ಟ್ 17ರಂದು ಜ್ಞಾನೋದಯವಾಗಿ ಸಿಗರೇಟ್ ಬಿಟ್ಟೆ. ಈಗ ಅದರ ವಾಸನೆ ಕಂಡರೂ ಆಗಲ್ಲ ಎಂದು ಸಿದ್ದರಾಮಯ್ಯ ‘ದಮ್​ಕಥೆ ನೆನೆದರು.